ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆರೆಯ ಮಧ್ಯೆ ತೆಪ್ಪದಲ್ಲಿ ಸಿಲುಕಿ ಪರದಾಡುತ್ತಿದ್ದ 3 ವರ್ಷದ ಮಗುವನ್ನ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ತಾಲೂಕು ಚುಂಚದೇನಹಳ್ಳಿ ಕೆರೆಯ ದಡದಲ್ಲಿ ಆಟವಾಡುತ್ತಿದ್ದ 3 ವರ್ಷದ ಅಮೂಲ್ಯ ತೆಪ್ಪದಲ್ಲಿ ಕೆರೆಯ ಮಧ್ಯೆ ನೀರಿನಲ್ಲಿ ಸಿಲುಕಿದ್ದಳು. ಬೃಹತ್ ಕೆರೆಯ ಮಧ್ಯೆ ತೆಪ್ಪದಲ್ಲಿ ಸಿಲುಕಿದ್ದ ಮಗುವನ್ನ ರಕ್ಷಣೆ ಮಾಡುವುದು ಹರಸಾಹಸವೇ ಆಗಿತ್ತು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಕೋಲಾರ ಗ್ರಾಮಾಂತರ ಪೊಲೀಸರು ಈಜುಗಾರ ನಿಜಾಮುದ್ದೀನ್ ನನ್ನ ಕರೆಸಿ ಮಗುವನ್ನ ರಕ್ಷಣೆ ಮಾಡಲು ಮುಂದಾದರು. ಆದ್ರೆ ಅವರಿಂದ ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಅಗ್ನಿ ಶಾಮಕದಳ ಸಿಬ್ಬಂದಿ ನಾಗಪ್ಪ ನಂದಿ 300 ಮೀ ಕೆರೆಯಲ್ಲಿ ಈಜುವ ಮೂಲಕ ಮಗುವನ್ನ ರಕ್ಷಣೆ ಮಾಡಿದ್ದಾರೆ.
ಚಿತ್ರದುರ್ಗ ಮೂಲದ ತಂದೆ ರಂಗಸ್ವಾಮಿ ಹಾಗೂ ತಾಯಿ ಅಂಜಲಿ ದಂಪತಿಯ 3 ವರ್ಷದ ಮಗು ಇದಾಗಿದೆ. ಕೆರೆಯಲ್ಲಿ ಮೀನು ಹಿಡಿಯಲು ಬಂದಿದ್ದ ವೇಳೆ ಕೆರೆಯ ದಡದಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ತೆಪ್ಪದಲ್ಲಿ ಕೆರೆಯ ಮಧ್ಯ ಭಾಗಕ್ಕೆ ಹೋಗಿ ಸಿಲುಕಿತ್ತು. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಮಗುವಿನ ರಕ್ಷಣೆ ಮಾಡಲಾಗಿದೆ.
ಆಟವಾಡುತ್ತಾ ತೆಪ್ಪದಲ್ಲಿ ಕುಳಿತು ಕೆರೆಯ ಮಧ್ಯದಲ್ಲಿ ಸಿಲುಕಿದ್ದ ಮಗುವಿನ ರಕ್ಷಣೆ

