ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವ್ಯಾರೂ ಸಿಎಂ ಅಧಿಕಾರದ ಅವಧಿ ಬಗ್ಗೆ ಮಾತನಾಡಿಲ್ಲ. ಅವರಿಗೆ ಏನು ಗೌರವ ಕೊಡಬೇಕೋ ಕೊಟ್ಟಿದ್ದೇವೆ. ಸಿದ್ದರಾಮಯ್ಯ ಪಕ್ಷಕ್ಕೆ ದೊಡ್ಡ ಆಸ್ತಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಹೈಕಮಾಂಡ್ ಮಾತು ಎಲ್ಲರೂ ಕೇಳಬೇಕೆಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿಎಂ ಏನು ಹೇಳಿದ್ದಾರೋ ಅದನ್ನು ಒಪ್ಪುತ್ತೇವೆ. ಅದರಲ್ಲಿ ನಮಗೇನೂ ತಕರಾರು ಇಲ್ಲ. ನಾವ್ಯಾರೂ ಸಿಎಂ ಅಧಿಕಾರದ ಅವಧಿ ಬಗ್ಗೆ ಮಾತಾಡಿಲ್ಲ. ಅವರಿಗೆ ಏನು ಗೌರವ ಕೊಡಬೇಕೋ ಕೊಟ್ಟಿದ್ದೇವೆ. ಅವರು ಪಕ್ಷಕ್ಕೆ ದೊಡ್ಡ ಆಸ್ತಿ. ಎಲ್ಲರೂ ಸೇರಿ ಒಟ್ಟಿಗೆ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿಕೊಂಡು ಹೋಗ್ತೇವೆ ಎಂದರು.
ಮಲ್ಲಿಕಾರ್ಜುನ ಖರ್ಗೆಯವರನ್ನು ಇನ್ನೂ ಭೇಟಿ ಮಾಡದ ವಿಚಾರವಾಗಿ ಪ್ರತಿಕ್ರಿಯಿಸಿ, ಮೊನ್ನೆ ತಾನೇ ದೆಹಲಿಯಲ್ಲಿ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಅಂಥ ಸಂದರ್ಭ ಇದ್ದರೆ ಹೋಗಿ ಭೇಟಿ ಮಾಡ್ತೇನೆ. ಅವರು ದೆಹಲಿಗೆ ಹೋಗಿ ಬರಲಿ ಅಥವಾ ಇಲ್ಲೇ ಇರಲಿ. ಸುಮ್ಮನೆ ಅವರಿಗೆ ತೊಂದರೆ ಕೊಡೋದು ಬೇಡ ಎಂದು ತಿಳಿಸಿದರು.
ದೆಹಲಿಗೆ ಶಾಸಕರ ಮತ್ತೊಂದು ತಂಡ ಹೋಗಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮಂತ್ರಿಗಳಾಗಬೇಕು ಅಂತ ಹೋಗಿದ್ದಾರೆ, ತಪ್ಪಾ? ಅವರು ಅವರ ಭವಿಷ್ಯ ಭದ್ರ ಮಾಡಿಕೊಳ್ಳಬೇಕಲ್ಲ. ಸಂಪುಟ ಪುನಾರಚನೆ ಮಾಡುತ್ತೇವೆ ಅಂತ ಹೇಳಿದ್ದಕ್ಕೇ ಅವರೆಲ್ಲ ಹೋಗಿದ್ದಾರೆ. ನಮಗೂ ಒಂದು ಅವಕಾಶ ಸಿಗುತ್ತದೆ ಅಂತ ಹೋಗಿದ್ದಾರೆ. ಬಿಜೆಪಿಯವರ ಜೊತೆ ಸೇರಿ ದಳದವರೂ ಇಕ್ಕಟ್ಟಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹಿಂದೆ ಅವರ ಸರ್ಕಾರ ಹೋಯಿತಲ್ಲವೇ?. ಅವರಲ್ಲಿ ಎಲ್ಲ ಪೋಸ್ಟ್ಗಳೂ ಹೊಟೇಲ್ ತಿಂಡಿ ಬಿಲ್ ಥರ ಮಾರಾಟ ಆಗಲಿಲ್ವೇ? ಅಪರೇಷನ್ ಲೋಟಸ್ ಮಾಡಲಿಲ್ವೇ ಎಂದು ವಾಗ್ದಾಳಿ ನಡೆಸಿದರು.

