Monday, November 24, 2025

ಬಿಹಾರದಲ್ಲಿ ಸನಾತನ ಧರ್ಮ ಪ್ರಚಾರಕ್ಕಾಗಿ 38 ಜಿಲ್ಲೆಗಳಲ್ಲಿ ಸಂಚಾಲಕರ ನೇಮಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಹಾರದಲ್ಲಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಎನ್ ಡಿಎ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸನಾತನ ಧರ್ಮವನ್ನು ಉತ್ತೇಜಿಸಲು ರಾಜ್ಯದ ಎಲ್ಲಾ 38 ಜಿಲ್ಲೆಗಳಲ್ಲಿ ಸಂಚಾಲಕರನ್ನು ನೇಮಕ ಮಾಡಲು ಮುಂದಾಗಿದೆ.

ಈ ಬಗ್ಗೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಸರ್ಕಾರದಿಂದ ನೇಮಕ ಮಾಡುವ ಸಂಚಾಲಕರಿಗೆ, ಸರ್ಕಾರದ ಅಡಿಯಲ್ಲಿ ನೋಂದಣಿ ಮಾಡಲಾಗಿರುವ ದೇವಾಲಯಗಳು ಹಾಗೂ ಮಠಗಳ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಸರ್ಕಾರದಿಂದ ನೇಮಕವಾಗಲಿರುವ ಸಂಚಾಲಕರು ದೇವಾಲಯ, ಮಠಗಳ ಮುಖ್ಯ ಅರ್ಚಕರೊಂದಿಗೆ ಸಮನ್ವಯದಿಂದ ಕೆಲಸ ಮಾಡಲಿದ್ದಾರೆ ಎಂದು ಬಿಹಾರ ರಾಜ್ಯ ಧಾರ್ಮಿಕ ಟ್ರಸ್ಟ್ ಕೌನ್ಸಿಲ್ (ಬಿಎಸ್‌ಆರ್‌ಟಿಸಿ) ಅಧ್ಯಕ್ಷರಾಗಿರುವ ರಣಬೀರ್ ನಂದನ್ ತಿಳಿಸಿದ್ದಾರೆ.

ಬಿಎಸ್‌ಆರ್‌ಟಿಸಿಯಲ್ಲಿ ಒಟ್ಟು 2,499 ದೇವಾಲಯಗಳು ಮತ್ತು ಮಠಗಳು ನೋಂದಣಿಯಾಗಿವೆ. “ರಾಜ್ಯಾದ್ಯಂತ ನೋಂದಾಯಿತ ದೇವಾಲಯಗಳು ಮತ್ತು ಮಠಗಳೊಂದಿಗೆ ಸಮನ್ವಯದಿಂದ ‘ಸನಾತನ ಧರ್ಮ’ದ ಪ್ರಚಾರ ಮತ್ತು ಪ್ರಚಾರಕ್ಕಾಗಿ ಕೆಲಸ ಮಾಡಲು ಎಲ್ಲಾ ಜಿಲ್ಲೆಗಳಲ್ಲಿ ಸಂಚಾಲಕರನ್ನು ನಾಮನಿರ್ದೇಶನ ಮಾಡಲು ಮಂಡಳಿ ನಿರ್ಧರಿಸಿದೆ” ಎಂದು ಬಿಎಸ್‌ಆರ್‌ಟಿಸಿ ಅಧ್ಯಕ್ಷ ರಣಬೀರ್ ನಂದನ್ ಪಿಟಿಐಗೆ ತಿಳಿಸಿದ್ದಾರೆ.

ಪ್ರತಿ ಜಿಲ್ಲೆಯಲ್ಲಿ ಒಬ್ಬ ಸಂಚಾಲಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಒಂದು ಅಥವಾ ಎರಡು ದಿನಗಳಲ್ಲಿ ಪ್ರಾರಂಭವಾಗಲಿದೆ ಮತ್ತು ಸಂಚಾಲಕರನ್ನು ಮಹಾಂತರಲ್ಲಿ ಮಾತ್ರ ಆಯ್ಕೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

error: Content is protected !!