ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿನ್ನೆ ಕುಟುಂಬಸ್ಥರ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಕಲಬುರಗಿಯ ಜೇವರ್ಗಿ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇದೀಗ ಅವರ ಮೃತದೇಹವನ್ನು ಕಲಬುರಗಿಯಿಂದ ಬೆಳಗಾವಿಯ ರಾಮದುರ್ಗಕ್ಕೆ ತಲುಪಿಸಲಾಗಿದ್ದು, ಕುಟುಂಬಸ್ಥರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.
ರಾಜ್ಯ ಕಂಡ ಜನಸ್ನೇಹಿ ಹಾಗೂ ದಕ್ಷ ಅಧಿಕಾರಿ ಐಎಎಸ್ ಮಹಾಂತೇಶ್ ಬೀಳಗಿ ವಿಜಯಪುರ ಮಾರ್ಗವಾಗಿ ಬರುತ್ತಿದ್ದ ಅವರ ಇನ್ನೋವಾ ಕಾರು, ರಸ್ತೆಯಲ್ಲಿ ಅಡ್ಡ ಬಂದ ಬೀದಿ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡಿದೆ. ನಂತರ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಸುಮಾರು ನೂರು ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಏರ್‌ಬ್ಯಾಗ್‌ಗಳು ತೆರೆದುಕೊಂಡಿದ್ದರೂ ಕಾರಿನಲ್ಲಿದ್ದವರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಐದು ಜನ ಪ್ರಯಾಣಿಸುತ್ತಿದ್ದು, ಐವರಲ್ಲಿ ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಮಹಾಂತೇಶ್ ಬೀಳಗಿ ಅವರ ಸ್ನೇಹಿತ ಇರಣ್ಣ ಸಿರಸಂಗಿ ಅವರೂ ಸಹ ಸಾವನ್ನಪ್ಪಿರುವುದು ದೃಢಪಟ್ಟಿದೆ. ಅಪಘಾತದ ಸ್ಥಳದಲ್ಲಿ ಮರ ಕಿತ್ತು ಬಂದಿರುವುದು ಕಾರಿನ ವೇಗ ಮತ್ತು ಡಿಕ್ಕಿಯ ಭೀಕರತೆಗೆ ಸಾಕ್ಷಿಯಾಗಿದೆ.
ಬಾಲ್ಯದಿಂದಲೂ ಕಷ್ಟಕರ ಜೀವನ ನಡೆಸಿದ ಅವರು ಬೆಳೆದು ಬಂದ ರೀತಿಯೇ ವಿಶೇಷವಾಗಿತ್ತು. ಅವರ ತಾಯಿ ಮನೆಗೆಲಸ ಮಾಡಿ ಮಹಾಂತೇಶ್ ಶಿಕ್ಷಣವನ್ನು ಮುಂದುವರಿಸಿದರು. ಕೆಎಎಸ್ ಪರೀಕ್ಷೆ ಮತ್ತು ನಂತರ ಐಎಎಸ್ ಪರೀಕ್ಷೆ ಪಾಸ್ ಮಾಡಿ ಉತ್ತಮ ಜೀವನ ಕಟ್ಟುಕೊಂಡಿದ್ದರು. ತಮ್ಮ ಬಾಲ್ಯದಲ್ಲಿ ತಾನು ಮತ್ತು ತಮ್ಮ ಸಹೋದರರು 5 ನೇ ವಯಸ್ಸಿನಿಂದ ಹೇಗೆ ಕಷ್ಟಪಟ್ಟರು ಎಂಬುದನ್ನು ಬೀಳಗಿ ಅವರು ಹಲವಯ ಸಂದರ್ಶನಗಳಲ್ಲಿ ನೆನಪಿಕೊಂಡಿದ್ದರು. ಮೃತರಿಗೆ ಪತ್ನಿ ಮತ್ತು ಮಕ್ಕಳಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

