ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೇರಿದಂತೆ 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ನನ್ನು ಹಸ್ತಾಂತರಿಸುತ್ತೀರಾ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪಾಕಿಸ್ತಾನಿ ಅಧಿಕಾರಿ ಉತ್ತರಿಸಲು ನಿರಾಕರಿಸಿದ್ದಾರೆ.
ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂಟರ್ಪೋಲ್ 90ನೇ ವಾರ್ಷಿಕ ಸಾಮಾನ್ಯ ಸಭೆ ಆರಂಭವಾಗಿದೆ. ಇದರಲ್ಲಿ ಪಾಕಿಸ್ತಾನದ ಪ್ರಮುಖ ಅಧಿಕಾರಿಯೊಬ್ಬರು ಭಾಗವಹಿಸಿದ್ದರು. ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಪರವಾಗಿ ಇಸ್ಲಾಮಾಬಾದ್ನ ಮೊಹ್ಸಿನ್ ಭಟ್ ಈ ಸಭೆಗೆ ಬಂದಿದ್ದರು. ಅಲ್ಲಿ ಭಾರತೀಯ ಮಾಧ್ಯಮಗಳು 1993ರ ಮುಂಬೈ ಸರಣಿ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಮತ್ತು 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸೈಯದ್ ಅವರನ್ನು ಹಸ್ತಾಂತರಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಲು ಮೊಹ್ಸಿನ್ ಭಟ್ ನಿರಾಕರಿಸಿದ್ದಲ್ಲದೆ, ಇಲ್ಲ.. ಇಲ್ಲ.. ಎಂಬ ರೀತಿ ಮೂಗಿನ ಮೇಲೆ ಬೆರಳಿಟ್ಟು “ಗುಪ್ ಚುಪ್” ಎಂಬಂತೆ ಸನ್ನೆ ಮಾಡಿದ್ದಾರೆ.
1993 ರಲ್ಲಿ ಮುಂಬೈ ಸ್ಫೋಟಗಳು ದೇಶದಲ್ಲಿ ಅಲ್ಲೋಲ-ಕಲ್ಲೋಲವನ್ನು ಸೃಷ್ಟಿಮಾಡಿತ್ತು. ಇಬ್ಬರು ಮಾಸ್ಟರ್ಮೈಂಡ್ಗಳು ಸದ್ಯ ಪಾಕಿಸ್ತಾನದಲ್ಲಿ ರಹಸ್ಯವಾಗಿ ಆಶ್ರಯ ಪಡೆದಿದ್ದಾರೆ. ಅವರನ್ನು ತನಿಖೆಗೆ ಒಪ್ಪಿಸಲು ಭಾರತ ಯಾವಾಗಿನಿಂದಲೂ ಕೇಳುತ್ತಿದೆ. ಆದರೆ, ಪಾಕಿಸ್ತಾನ ಮಾತ್ರ ಅವರನ್ನು ಹಸ್ತಾಂತರಿಸುವ ವಿಚಾರದಲ್ಲಿ ಆಸಕ್ತಿ ತೋರುತ್ತಿಲ್ಲ. 2003ರಲ್ಲಿ ಭಾರತ ಮತ್ತು ಅಮೆರಿಕ ದಾವೂದ್ ಇಬ್ರಾಹಿಂನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿದ್ದವು. ಭಾರತ ಕೂಡ ಆತನನ್ನು ಹಿಡಿದು ಕೊಟ್ಟವರಿಗೆ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.