ಇದು ರಿಷಬ್​ ಮಾಡಿದ ಚಿತ್ರ ಅಲ್ಲ, ದೇವರ ಮಾಡಿಸಿದ್ದು: ನಾನು ಕಂಡ ಕಾಂತಾರ ಕುರಿತು ತಿಳಿಸಿದ ಜಗ್ಗೇಶ್​!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಸಿನಿಮಾವನ್ನು ಇಡೀ ವಿಶ್ವವೇ ಮರಳಾಗಿದ್ದು, ನೋಡಿದ ಪ್ರತಿಯೊಬ್ಬರು ಹೊಗಳುತ್ತಿದ್ದಾರೆ.
ಕನ್ನಡದ ಬಹುತೇಕ ಸ್ಟಾರ್​ ಕಲಾವಿದರು ರಿಷಬ್​ ಶೆಟ್ಟಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ‘ನವರಸ ನಾಯಕ’ ಜಗ್ಗೇಶ್​ ಅವರು ಕಾಂತಾರ ನೋಡಿ ಖುಷಿಪಟ್ಟಿದ್ದಾರೆ.

ಅಮೆರಿಕಕ್ಕೆ ತೆರಳಿರುವ ಅವರು ಅಲ್ಲಿಯೇ ಸಿನಿಮಾ ನೋಡಿದ್ದಾರೆ. ಬಳಿಕ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.

‘ಇದು ರಿಷಬ್​ ಮಾಡಿದ ಚಿತ್ರ ಅಲ್ಲ, ದೇವರ ಮಾಡಿಸಿದ್ದು’ ಎಂದು ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡ ಅವರು, ‘ಇದೊಂದು ಅದ್ಭುತ ಸಿನಿಮಾ’ ಎಂದು ಕೊಂಡಾಡುವುದರ ಜೊತೆಗೆ, ಈ ಚಿತ್ರದಲ್ಲಿ ತಮಗೆ ಏನೆಲ್ಲ ಇಷ್ಟ ಆಯ್ತು ಎಂಬುದನ್ನು ಅವರು ತಿಳಿಸಿದ್ದಾರೆ.

‘ಇಂದು ಅಮೆರಿಕದಲ್ಲಿ ಕಾಂತಾರ ನೋಡುವ ಅವಕಾಶ ಸಿಕ್ಕಿತು, ನೋಡಿ ಬಂದೆ. ನಾನು ದಕ್ಷಿಣ ಕನ್ನಡದ ದೇವಾಲಯದ ಭಕ್ತ. ವರ್ಷಕ್ಕೆ ಒಂದು ಬಾರಿ ಪೊಳಲಿ, ಕಟೀಲು, ಉಡುಪಿ ಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆವುದು ನನ್ನ 30 ವರ್ಷದ ಅಭ್ಯಾಸ. ನನ್ನ ಪ್ರಕಾರ, ಇದು ಶ್ರೇಷ್ಠ ದೇವಭೂಮಿ. ಆಧ್ಯಾತ್ಮಿಕ ಅನುಭವಕ್ಕೆ ಸಂತೃಪ್ತ ಭಾವ ಸಿಗುತ್ತದೆ. ಇಂಥ ನಾಡಿನಿಂದ ಎಂಥ ಅದ್ಭುತ ನಟ-ನಿರ್ದೇಶಕ ರಿಷಬ್​ ಶೆಟ್ಟಿ ಹುಟ್ಟಿಬಂದ. ಎಂಥ ಅದ್ಭುತ ಕೊಡುಗೆ ಈತ ಕನ್ನಡ ಚಿತ್ರರಂಗಕ್ಕೆ. ಕಡೆಯ 25 ನಿಮಿಷ ನಾನು ಎಲ್ಲಿರುವೆ ಅಂತ ಮರೆತು ಹೋಯಿತು’ ಎಂದಿದ್ದಾರೆ ಜಗ್ಗೇಶ್​.

‘ಚಿತ್ರ ನೋಡಿದ ಮೇಲೆ ಮೌನವಾಯಿತು ದೇಹ, ಮನಸ್ಸು. ಹೊರಬಂದಾಗ ಮಂತ್ರಾಲಯ ನರಸಿಂಹಚಾರ್ ವಾಟ್ಸಾಪ್ ಕರೆಮಾಡಿ ರಾಯರ ದರ್ಶನ ಮಾಡಿಸಿದರು. ನಂತರ ನನಗೆ ಅನ್ನಿಸಿದ್ದು, ಇದು ರಿಷಬ್​ ಮಾಡಿದ ಚಿತ್ರವಲ್ಲ. ಬದಲಿಗೆ ಆತನ ವಂಶೀಕರ ತಂದೆ ತಾಯಿಯ ಆಶೀರ್ವಾದ, ನಶಿಸುತ್ತಿರುವ ಆಧ್ಯಾತ್ಮಿಕ ಭಾವ ಮತ್ತೆ ಮನುಷ್ಯರಿಗೆ ನೆನಪಿಸಲು ದೇವರೇ ಬಂದು ಆತನ ಕೈಯಲ್ಲಿ ಇಂಥ ಅದ್ಭುತ ಸಿನಿಮಾ ಮಾಡಿಸಿದ್ದಾರೆ. ದೇವರು ನೂರ್ಕಾಲ ಆಯುಷ್ಯ, ಆರೋಗ್ಯ ರಿಷಬ್​ಗೆ ಕೊಟ್ಟು, ಕನ್ನಡ ಕಲಾರಂಗಕ್ಕೆ ಆತನ ಸೇವೆ ಇದೇ ರೀತಿ ಮುಂದುವರಿಯಲಿ ಎಂದು ನನ್ನ ಶುಭಹಾರೈಕೆ. ಕಾಂತಾರ ಸಿನಿಮಾ ಅಲ್ಲ, ರೋಮಾಂಚನ ಅನುಭವ. ಇಡೀ ತಂಡಕ್ಕೆ ದೇವರ ಒಳ್ಳೆಯದು ಮಾಡಲಿ’ ಎಂದು ಜಗ್ಗೇಶ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!