ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಚುನಾವಣೆ ಈಗಾಗಲೇ ಎಲ್ಲಾ ಪಕ್ಷಗಳು ಸಿದ್ಧತೆ ಶುರುಮಾಡಿದ್ದು, ನಾನಾ ಯಾತ್ರೆಗಳನ್ನು ನಡೆಸುತ್ತಿದೆ. ಇದೀಗ ನವೆಂಬರ್ 1ರಂದು ಕೋಲಾರ ಜಿಲ್ಲೆ ಮುಳಬಾಗಿಲಿನಿಂದ ಜೆಡಿಎಸ್ ‘ಪಂಚರತ್ನ’ ರಥಯಾತ್ರೆ ಆರಂಭಗೊಳ್ಳಲಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
994ರ ಚುನಾವಣೆಯಲ್ಲಿ ಮುಳಬಾಗಿಲಿನಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರಚಾರ ಆರಂಭಿಸಿ ಸ್ಪಷ್ಟ ಬಹುಮತದೊಂದಿಗೆ ಗದ್ದುಗೆ ಏರಿದ್ದರು. ಹಾಗಾಗಿ, ಅಲ್ಲಿಂದಲೇ ಆರಂಭಿಸಬೇಕು ಎಂದು ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಇನ್ನಿತರ ಹಿರಿಯರ ಅಭಿಲಾಷೆಯಂತೆ ಸ್ಥಳ ಬದಲಾಯಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಈ ಮೊದಲು ಮೈಸೂರಿನ ಚಾಮುಂಡಿಬೆಟ್ಟದಿಂದ ರಥಯಾತ್ರೆ ಆರಂಭಿಸಲು ಉದ್ದೇಶಿಸಲಾಗಿತ್ತು.
ಮುಳಬಾಗಿಲಿನಲ್ಲಿ ಆಂಜನೇಯ ಮತ್ತು ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಡಿಸೆಂಬರ್ 6ರವರೆಗೆ ಒಟ್ಟು 36 ವಿಧಾನಸಭಾ ಕ್ಷೇತ್ರಗಳಲ್ಲಿ ರಥಯಾತ್ರೆ ಸಂಚರಿಸಲಿದೆ. ಪ್ರತಿ ತಾಲೂಕಿನಲ್ಲಿ ಆರು ಸಣ್ಣ ಸಭೆ, ಮೂರು ಸಾರ್ವಜನಿಕ ಸಭೆ ನಡೆಸುವುದಲ್ಲದೇ ಸಾರ್ವಜನಿಕರು, ರೈತರೊಂದಿಗೆ ಮಾತುಕತೆ ನಡೆಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದ ಒಂದು ಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಹೂಡಲಾಗುವುದು ಎಂದರು.
ಇನ್ನು ಎರಡನೇ ಹಂತದ ರಥಯಾತ್ರೆ ಮೈಸೂರಿನಿಂದ ಆರಂಭಿಸಲಿದ್ದು, ದಿನಾಂಕವನ್ನು ಬಳಿಕ ನಿರ್ಧರಿಸಲಾಗುವುದು. ಮಿಷನ್-123 ಗುರಿಯನ್ನು ಈ ಬಾರಿ ತಲುಪಲಿದೆ ಎಂದರು.
ಪಂಚರತ್ನ ಎಂದರೆ ಅದು ಕೇವಲ ಘೋಷಣೆ ಅಲ್ಲ. ಎಲ್ಲರಿಗೂ ಉಚಿತ ಶಿಕ್ಷಣ, ಆರೋಗ್ಯ, ವಿದ್ಯುತ್, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ, ಪ್ರತಿ ಕುಟುಂಬಕ್ಕೆ ಯಾವುದಾದರೊಂದು ಉದ್ಯೋಗ, ಸ್ವಂತ ಉದ್ಯೋಗ ಕಲ್ಪಿಸುವ ಮೂಲಕ ಆರ್ಥಿಕ ಬಲವನ್ನು ತುಂಬುವುದು, ಪ್ರತಿಯೊಬ್ಬರಿಗೂ ಸೂರು ಒದಗಿಸುವುದು ಇದರ ಉದ್ದೇಶ. ಈ ಬಗ್ಗೆ ನೀಲನಕ್ಷೆಯೂ ಸಿದ್ಧವಾಗಿದೆ ಎಂದು ಹೇಳಿದರು.
ನವೆಂಬರ್ನಲ್ಲಿ ಘೋಷಣೆ
ರಾಜ್ಯದ 224 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಈಗಾಗಲೇ 126 ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗಿದ್ದು, ನವೆಂಬರ್ 1ರಂದು 106 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಹಿರಂಗ ಪಡಿಸಲಾಗುವುದು ಎಂದು ಎಚ್ಡಿಕೆ ತಿಳಿಸಿದರು.