ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸ್ ‘ವಾಯ್ಸ್ ಆಫ್ ಹಿಂದ್’ ಮಾಡ್ಯೂಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ವಾರಣಾಸಿ ಮತ್ತು ದೆಹಲಿಯ ಎರಡು ಸ್ಥಳಗಳಲ್ಲಿ ದಾಳಿ ನಡೆಸಿದ್ದು 24ವರ್ಷದ ಭಯೋತ್ಪಾದಕನೊಬ್ಬನನ್ನು ಬಂಧಿಸಿದೆ. ಆತ ಭಾರತದ ವಿರುದ್ಧ ದುಷ್ಕೃತ್ಯ ನಡೆಸಲು ಐಸಿಸ್ ಪರವಾಗಿ ಭಾರತೀಯ ಯುವಕರ ನೇಮಕಾತಿಯಲ್ಲಿ ತೊಡಗಿದ್ದ ಎನ್ನಲಾಗಿದೆ.
ಉತ್ತರ ಪ್ರದೇಶದ ವಾರಣಾಸಿ ಮತ್ತು ದೆಹಲಿಯ ಎರಡು ಸ್ಥಳಗಳಲ್ಲಿ ಎನ್‌ಐಎ ದಾಳಿ ನಡೆಸಿ ವಾರಣಾಸಿ ನಿವಾಸಿ ಬಸಿತ್ ಕಲಾಂ ಸಿದ್ದಿಕಿ (24) ನನ್ನು ಬಂಧಿಸಿದೆ. “ಭಯೋತ್ಪಾದಕ ಹಿಂಸಾಚಾರದ ವೇಳೆ ಕೃತ್ಯಗಳನ್ನು ನಡೆಸುವ ಮೂಲಕ ಭಾರತದ ವಿರುದ್ಧ ಹಿಂಸಾತ್ಮಕ ಜಿಹಾದ್ ನಡೆಸಲು ಮತ್ತು ಭಾರತದಲ್ಲಿ ಪ್ರಭಾವಶಾಲಿ ಯುವಕರ ತಲೆಕೆಡಿಸಿ ನೇಮಕ ಮಾಡಲು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಐಸಿಸ್ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದೆ” ಎಂದು ಎನ್ಐಎ ಹೇಳಿಕೆಯಲ್ಲಿ ತಿಳಿಸಿದೆ.
ತನಿಖೆಯ ಸಮಯದಲ್ಲಿ, ಬಸಿತ್ ಕಲಾಂ ಸಿದ್ದಿಕಿ ಭಾರತದಿಂದ ಐಸಿಸ್ ಪರವಾಗಿ ಮೂಲಭೂತವಾದ ಮತ್ತು ಯುವಕರ ನೇಮಕಾತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಬಸಿತ್ ಕಲಾಂ ಐಸಿಸ್ ಕಾರ್ಯಾಚರಣೆ ನಿರ್ವಾಹಕರೊಂದಿಗೆ ಸಕ್ರಿಯ ಸಂಪರ್ಕದಲ್ಲಿದ್ದ ಮತ್ತು ‘ವಾಯ್ಸ್ ಆಫ್ ಖುರಾಸನ್’ ನಿಯತಕಾಲಿಕದ ಮೂಲಕ ಐಸಿಸ್ ಪ್ರಚಾರದ ವಿಷಯ ರಚನೆ, ಪ್ರಕಟಣೆ ಮತ್ತು ಪ್ರಸಾರದಲ್ಲಿ ತೊಡಗಿಸಿಕೊಂಡಿದ್ದ ಎಂದು ಎನ್‌ಐಎ ಹೇಳಿಕೆ ತಿಳಿಸಿದೆ ಎಂದು ತಿಳಿದುಬಂದಿದೆ ಎಂದು ಮೂಲಗಳು ವರದಿ ಮಾಡಿವೆ.