ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನಟ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಹಲವು ದಿನಗಳೇ ಕಳೆದಿದ್ದರೂ, ಅವರ ಸಾಮಾಜಿಕ ಸೇವೆ, ನಟಿಸಿದಂತ ಚಿತ್ರಗಳ ಮೂಲಕ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಇಂತಹ ನಟ ಪುನೀತ್ ರಾಜ್ ಕುಮಾರ್ ಗೆ ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು.
ಈ ಪ್ರಶಸ್ತಿಯನ್ನು ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಪ್ರದಾನ ಮಾಡಲಾಗುತ್ತಿದೆ.
ಈ ಬಗ್ಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ ಕುಟುಂಬದೊಂದಿಗೆ ಮಹತ್ವದ ಸಭೆಯನ್ನು ನಡೆಸಲಾಗಿದ್ದು, ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ , ಈಗಾಗಲೇ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಸಭೆಯಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಕೊಡುವ ಬಗ್ಗೆ ಘೋಷಣೆ ಮಾಡಲಾಗಿತ್ತು. ನವೆಂಬರ್ 1ರಂದು ಪ್ರಶಸ್ತಿ ಪ್ರದಾನ ಮಾಡುವ ಬಗ್ಗೆಯೂ ಇಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ನವೆಂಬರ್ 1ರಂದು ಸಂಜೆ 4 ಗಂಟೆಗೆ ವಿಧಾನಸಭೆಯ ಮೆಟ್ಟಿಲ ಮೇಲೆ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.