ಹೊಸ ದಿಗಂತ ವರದಿ, ಅಂಕೋಲಾ :
ದೇವರಲ್ಲಿ ಅಚಲ ವಿಶ್ವಾಸ-ನಂಬಿಕೆ ಇಲ್ಲದೇ ನಾವು ಮಾಡುವ ಯಾವುದೇ ಆಚರಣೆಗಳು ಫಲ ನೀಡಲು ಸಾಧ್ಯವಿಲ್ಲ. ನಮ್ಮೆಲ್ಲ ನೋವು, ಸಂಕಷ್ಟಕ್ಕೆ ದೇವರಿದ್ದಾನೆ ಎಂಬ ವಿಶ್ವಾಸವನ್ನು ನಾವೆಲ್ಲರೂ ಮೊದಲು ಬಲಪಡಿಸಿಕೊಳ್ಳಬೇಕು ಎಂದು ಪರ್ತಗಾಳಿ ಜೀವೋತ್ತಮ ಮಠದ ಶ್ರೀಮದ್ ವಿದ್ಯಾಧೀಶ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಇಲ್ಲಿಯ ಹನುಮಟ್ಟದ ಶ್ರೀ ಲಕ್ಷ್ಮೀನಾರಾಯಣ ಮಹಾಮಾಯಾ ದೇವಸ್ಥಾನದಲ್ಲಿ ಜರುತ್ತಿರುವ ಭಾಂಗ್ರಾ ಮಹಾಮ್ಮಾಯಿ ಉತ್ಸವದಲ್ಲಿ ಆಶೀರ್ವಚನ ನೀಡಿದರು.
ದೇವರನ್ನು ಕಾಣಿಸು ಎಂದು ಸವಾಲು ಹಾಕಿದರೆ ಅದನ್ನು ತೋರಿಸಲಾಗದು. ಅಂದ ಮಾತ್ರಕ್ಕೆ ದೇವರೇ ಇಲ್ಲ ಎನ್ನುವುದು ತಪ್ಪು. ಅದು ಅನುಭವಕ್ಕೆ ರುವ ಮತ್ತು ನಮ್ಮ ಹಿರಿಯರು ರಚಿಸಿದ ವೇದ, ಪುರಾಣ, ಉಪನಿಷತ್ತುಗಳಿಂದ ವೇದ್ಯವಾಗುವ ಸಂಗತಿ. ದೇವರಲ್ಲಿ ನಂಬಿಕೆ ಇಲ್ಲದೇ ಯಾವುದೇ ಯಜ್ಞ ಯಾಗಾದಿ ಮಾಡಿ ಫಲ ಸಿಕ್ಕಿಲ್ಲ ಎಂದರೆ ಅದು ನಮ್ಮದೇ ದೋಷ ಎಂದರು ಶ್ರೀಗಳು.
ಶ್ರೀ ಲಕ್ಷ್ಮೀನಾರಾಯಣ ಮಹಾಮಾಯಾ ದೇವಸ್ಥಾನಕ್ಕೂ, ಪರ್ತಗಾಳಿ ಮಠಕ್ಕೂ ಇರುವ ಗಾಢ ಸಂಬಂಧ ಸ್ಮರಿಸಿಕೊಂಡ ಶ್ರೀಗಳು ಬಂಗಾರದ ಮಹಾಮಾಯಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ನಮ್ಮದೂ ಭಾಗ್ಯ ಎಂದರು.
ಇದೇ ಸಂದರ್ಭದಲ್ಲಿ ಶ್ರೀಗಳು ಹಿರಿಯ ಅರ್ಚಕ ಅನಂತ ಭಟ್ಟ ಬೇರುಳ್ಳಿ ಅವರನ್ನು ಸನ್ಮಾನಿಸಿದರು. ಇನ್ನೋರ್ವ ಅರ್ಚಕ ದೇವಿದಾಸ ಭಟ್ ಅವರ ಪರವಾಗಿ ಸನ್ಮಾನ ನೀಡಲಾಯಿತು.
ದೇವಸ್ಥಾನ ಕಮಿಟಿ ಪರವಾಗಿ ಶ್ರೀನಿವಾಸ ಧೆಂಪೋ, ಸುರೇಶ ನಾಯಕ ಪಾದಪೂಜೆ ನೆರವೇರಿಸಿದರು. ಕಮಿಟಿಯ ರಾಘವ ಬಾಳೇರಿ ವಂದಿಸಿದರು. ವೇದಿಕೆಯಲ್ಲಿ ದೇವಸ್ಥಾನ ಆಡಳಿತ ಕಮಿಟಿಯ ಸದಸ್ಯರಾದ ರವಳನಾಥ ಘೋಡೆ, ವಿಜಯ ಪೈ, ಮೋಹನ ಜಿ. ಮಹಾಲೆ , ದೇವಸ್ಥಾನ ಹಾಗೂ ಮಠ ಕಮಿಟಿ ಅಧ್ಯಕ್ಷ ಶ್ರೀನಿವಾಸ ಧೆಂಪೋ , ವಿಶ್ವನಾಥ ನಾಯಕ, ಮುರಳೀಧರ ಪ್ರಭು ಉಪಸ್ಥಿತರಿದ್ದರು.
ಕಾಶೀ ಮಠಾಧೀಶರ ಭೇಟಿ , ದೇವಿದರುಶನ
ಗುರುವಾರ ಹನುಮಟ್ಟದ ಶ್ರೀ ಲಕ್ಷ್ಮೀನಾರಾಯಣ ಮಹಾಮಾಯಾ ದೇವಸ್ಥಾನದಲ್ಲಿ ಜರುತ್ತಿರುವ ಭಾಂಗ್ರಾ ಮಹಾಮ್ಮಾಯಿ ಉತ್ಸವದಲ್ಲಿ ಕಾಶೀ ಮಠಾಧೀಶರಾದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಭೇಟಿ ನೀಡಿ ಬಂಗಾರದ ಮಹಾಮ್ಮಾಯಿಯ ದರುಶನ ಪಡೆದರು. ನಂತರ ಶ್ರೀಗಳಿಗೆ ದೇವಸ್ಥಾನದ ವತಿಯಿಂದ ಪಾದಪೂಜೆ ನೀಡಲಾಯಿತು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಅಪರೂಪದ ಈ ಉತ್ಸವವನ್ನು ಸುಂದರ, ವ್ಯವಸ್ಥಿತ ರೀತಿ ಸಂಘಟಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.