ಹೊಸ ದಿಗಂತ ವರದಿ, ಬಾಗಲಕೋಟೆ:
ಆಸ್ತಿ ದಾಖಲು ಮಾಡಿ ಉತಾರ ಪೂರೈಸಲು 2,50,000 ಲಂಚದ ಬೇಡಿಕೆ ಇಟ್ಟಿದ್ದ ಇಬ್ಬರು ಪಿಡಿಓಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ತಾಲ್ಲೂಕಿನ ಬೇವಿನಮಟ್ಟಿ ಗ್ರಾಮದ ವಾಸುದೇವ ರಾ.ಜಾಧವ (ಸಾ:ಹೊನ್ನಾಕಟ್ಟಿ) ಎಂಬ ರೈತ ಬೇವಿನಮಟ್ಟಿ ಗ್ರಾಮದ ಸರ್ವೆ ನಂ. 62/2ಕ/1ಕ್ಕೆ ಸಂಬಂಧಿಸಿದ್ದನ್ನು ಪಂಚಾಯ್ತಿ ಆಸ್ತಿಗೆ ದಾಖಲು ಮಾಡಿ ಕಂಪ್ಯೂಟರ ಉತಾರ ಪೂರೈಸಲು ಬೇವಿನಮಟ್ಟಿ ಗ್ರಾಮ ಪಂಚಾಯ್ತಿ ಪಿಡಿಓ ಚಂದ್ರಕಾಂತ ಕೆ.ತಿಮ್ಮಾಪೂರ ರಾಂಪೂರ ಪಿಡಿಓ ಮುದಕಪ್ಪ ಬಿ.ತೇಜಿ ಯವರ ಮುಖಾಂತರ 2,50,000 ಲಂಚದ ಬೇಡಿಕೆ ಇಟ್ಟಿದ್ದು ಮೊದಲನೇ ಕಂತಿನ ಹಣ ಒಂದು ಲಕ್ಷ ಕೊಡಬೇಕು, ಉಳಿದ ರೂ.1,50,000 ಕೆಲಸವಾದ ನಂತರ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದ ಬಗ್ಗೆ ಲೋಕಾಯುಕ್ತಕ್ಕೆ ರೈತ ದೂರು ನೀಡಿದ್ದರು.
ರೈತ ವಾಸುದೇವ ಅವರಿಂದ ಮಧ್ಯಾಹ್ನ 1.30ಕ್ಕೆ ಬೇವಿನಮಟ್ಟಿ ಪಂಚಾಯ್ತಿ ಪಿಡಿಓ ಚಂದ್ರಕಾoತ ತಿಮ್ಮಾಪೂರ ಅವರು ನವನಗರದ ಪಿಡಬ್ಲ್ಯೂಡಿ ಕಚೇರಿ ಆವರಣದಲ್ಲಿ ಒಂದು ಲಕ್ಷ ಲಂಚವನ್ನು ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಅಧಿಕಾರಿಗಳು ಟ್ರಾಪ್ ಮಾಡಿ ದಸ್ತಗಿರ ಮಾಡಲಾಗಿದೆ. ಇಬ್ಬರು ಪಿಡಿಓಗಳನ್ನು ದಸ್ತಗಿರಿ ಮಾಡಲಾಗಿದೆ.
ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ ಸೂಚನೆ ಮೇರೆಗೆ ಲೋಕಾಯುಕ್ತ ಅಧೀಕ್ಷಕಿ ಅನಿತಾ ಹದ್ದಣ್ಣವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಡಿಎಸ್ಪಿ ಪುಷ್ಪಲತಾ ನೇತೃತ್ವದ ತಂಡ ಟ್ರ್ಯಾಪ್ ಪ್ರಕ್ರಿಯೆ ಯಶಸ್ವಿಯಾಗಿ ಜರುಗಿಸಿದೆ.