ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈದ್ಯರು ಹಾಗೂ ರಕ್ತನಿಧಿ ಕೇಂದ್ರದ ನಿರ್ಲಕ್ಷ್ಯದಿಂದ ರೋಗಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಡೆಂಗ್ಯೂ ಸೋಂಕಿತ ರೋಗಿಗೆ ಪ್ಲಾಸ್ಮಾ ವರ್ಗಾವಣೆ ಮಾಡಬೇಕಾಗಿತ್ತು, ಆದರೆ ಪ್ಲಾಸ್ಮಾ ಬದಲಿಗೆ ಮೂಸಂಬಿ ಹಣ್ಣಿನ ರಸವನ್ನು ಕೊಟ್ಟಿದ್ದಾರೆ. ಪರಿಣಾಮವಾಗಿ, ರೋಗಿಯು ಸಾವನ್ನಪ್ಪಿದ್ದಾನೆ. ಉತ್ತರ ಪ್ರದೇಶದಲ್ಲಿ ನಡೆದ ಘಟನೆಯ ಕುರಿತು ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ತನಿಖೆಗೆ ಆದೇಶಿಸಿದ್ದಾರೆ.
ಅಕ್ಟೋಬರ್ 17 ರಂದು ಪ್ರಯಾಗ್ರಾಜ್ನ ಝಲ್ವಾ ಪ್ರದೇಶದ ಗ್ಲೋಬಲ್ ಆಸ್ಪತ್ರೆಗೆ ಡೆಂಗ್ಯೂಯಿಂದ ಬಳಲುತ್ತಿದ್ದ ಪ್ರದೀಪ್ ಪಾಂಡೆ ಎಂಬ ರೋಗಿಯನ್ನು ದಾಖಲು ಮಾಡಲಾಗಿತ್ತು. ಪ್ಲಾಸ್ಮಾ ಹಾಕಬೇಕೆಂದು ವೈದ್ಯರು ತಿಳಿಸಿದ್ದರಿಂದ, ಪ್ಲಾಸ್ಮಾಕ್ಕಾಗಿ ಹತ್ತಿರದ ರಕ್ತನಿಧಿಯನ್ನು ಸಂಪರ್ಕಿಸಲಾಯಿತು. ರಕ್ತನಿಧಿ ಸಿಬ್ಬಂದಿ ಮೂಸಂಬಿ ಜ್ಯೂಸ್ ತುಂಬಿದ್ದ ಪ್ಲಾಸ್ಮಾ ಬ್ಯಾಗ್ ಅನ್ನು ರೋಗಿಯ ಸಂಬಂಧಿಕರಿಗೆ ನೀಡಿದ್ದಾರೆ. ಅದನ್ನು ತೆಗೆದುಕೊಂಡು ಹೋಗಿ ವೈದ್ಯರಿಗೆ ಕೊಟ್ಟಿದ್ದಾರೆ. ವೈದ್ಯರು ಕೂಡಾ ಅದನ್ನು ಪರೀಕ್ಷಿಸದೆ ರೋಗಿಗೆ ಹಾಕಿದ್ದಾರೆ. ಇವರಿಬ್ಬರ ನಿರ್ಲಕ್ಷ್ಯಕ್ಕೆ ಪ್ರದೀಪ್ ಪಾಂಡೆ ಸಾವನ್ನಪ್ಪಿದ್ದಾರೆ.
ಈ ವಿಷಯ ತಿಳಿದ ಮೃತನ ಸಂಬಂಧಿಕರೊಬ್ಬರು ಮೂಸಂಬಿ ರಸವಿರುವ ರಕ್ತದ ಚೀಲವನ್ನು ತೋರಿಸಿ ವಿಡಿಯೋ ತೆಗೆದು ಟ್ವಿಟರ್ನಲ್ಲಿ ಹಾಕಿದ್ದಾರೆ. ಆಸ್ಪತ್ರೆಯಲ್ಲಿದ್ದ ಎಲ್ಲ ರೋಗಿಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಈ ಕುರಿತು ತನಿಖೆ ನಡೆಸಲು ಜಿಲ್ಲಾಡಳಿತ ತ್ರಿಸದಸ್ಯ ಸಮಿತಿಗೆ ಆದೇಶಿಸಿದೆ. ತನಿಖೆಗಾಗಿ ಮೂಸಂಬಿ ಜ್ಯೂಸ್ ಬ್ಯಾಗ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆಯ ಪ್ರಾಥಮಿಕ ತನಿಖೆಯಲ್ಲಿ ವೈದ್ಯರ ನಿರ್ಲಕ್ಷ್ಯ ಬಯಲಾಗಿದೆ. ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ.