ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇದಾರನಾಥ, ಬದರಿನಾಥ ಮಾತ್ರವಲ್ಲದೆ ಉತ್ತರಾಖಂಡದಲ್ಲಿ ಭೇಟಿ ನೀಡುವಂತಹ ಇನ್ನೂ ಕೆಲವು ಕಷ್ಟಕರವಾದ ದೇವಾಲಯಗಳಿವೆ. ಇಲ್ಲಿರುವ ದೇವರ ದರ್ಶನ ಅಷ್ಟು ಸುಲಭವಲ್ಲ. ಆ ದೇವರುಗಳ ದರ್ಶನ ಪಡೆಯಬೇಕಾದರೆ, ಭಕ್ತಿ ಮಾತ್ರ ಸಾಲದು. ಮೈಯಲ್ಲಿ ಶಕ್ತಿಯೂ ಇರಬೇಕು. ಅನೇಕ ನೈಸರ್ಗಿಕ ಮತ್ತು ಹವಾಮಾನದ ಅಡೆತಡೆಗಳನ್ನು ನಿವಾರಿಸುವ ಇಚ್ಛಾಶಕ್ತಿಯನ್ನು ಹೊಂದಿರಬೇಕು. ಅವು ಯಾವ್ಯಾವು ಗೊತ್ತಾ?
ಶಂಕರನ ಪುಣ್ಯ ಕ್ಷೇತ್ರ
ಕೈಲಾಸ ಮಾನಸ ಸರೋವರದಲ್ಲಿ ಸಾಕ್ಷಾತ್ ಪರಶಿವನ ವಾಸಸ್ಥಾನ. ಇಲ್ಲಿಗೆ ತೆರಳುವುದು ನಿಜಕ್ಕೂ ತುಂಬಾ ಸವಾಲಿನ ಕೆಲಸ. ಪ್ರಸ್ತುತ ಇದು ಚೀನಾ ಆಕ್ರಮಿತ ಟಿಬೆಟ್ನಲ್ಲಿದೆ. ಈ ಸ್ಥಳದಲ್ಲಿ ಕೈಲಾಸ ಪರ್ವತದ ಜೊತೆಗೆ ಮಾನಸ ಸರೋವರವು ಬಹಳ ಆಕರ್ಷಕವಾಗಿದೆ. ಅಲ್ಲಿ ಶಂಕರನೇ ಇದ್ದಾನೆ ಎಂದು ಭಕ್ತರು ನಂಬುತ್ತಾರೆ.
ರುದ್ರಪ್ರಯಾಗದಲ್ಲಿರುವ ಕಾರ್ತಿಕ ಸ್ವಾಮಿ ದೇವಸ್ಥಾನ
ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೊಳುವಾಯಿಯಲ್ಲಿ ಕಾರ್ತಿಕ ಸ್ವಾಮಿಯ ದೇವಸ್ಥಾನವಿದೆ. ಈ ಪುರಾತನ ದೇವಾಲಯಕ್ಕೆ ಇನ್ನೂರು ವರ್ಷಗಳ ಇತಿಹಾಸವಿದೆ. ಉತ್ತರಾಖಂಡದ ಏಕೈಕ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯ ಕೂಡ ಇದಾಗಿದೆ. 3,050 ಮೀಟರ್ ಎತ್ತರದಲ್ಲಿರುವ ಈ ದೇವಸ್ಥಾನವನ್ನು ತಲುಪಲು ಸಾಹಸ ಮಾಡಲೇಬೇಕು. ಇಲ್ಲಿಗೆ ತಲುಪಲು ಭಕ್ತರು ಕನಕಚೌರಿ ಗ್ರಾಮದಿಂದ 3 ಕಿಲೋಮೀಟರ್ ಪಾದಯಾತ್ರೆ ಮಾಡಬೇಕು.
ಯಮುನೋತ್ರಿ ದೇವಾಲಯ
ಯುಮುನೋತ್ರಿ ದೇವಾಲಯವು ಉತ್ತರಾಖಂಡ ಚಾರ್ಧಾಮ್ ಯಾತ್ರೆಯ ನಾಲ್ಕು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಈ ಸುಂದರವಾದ ದೇವಾಲಯವು ಉತ್ತರಕಾಶಿ ಜಿಲ್ಲೆಯಲ್ಲಿದೆ. ಈ ದೇವಾಲಯವು 3 ಸಾವಿರದ 293 ಮೀಟರ್ ಎತ್ತರದಲ್ಲಿದೆ. ಇಲ್ಲಿಗೆ ತಲುಪಲು ಬಲವಾದ ಮಾನಸಿಕ ಮತ್ತು ದೈಹಿಕ ಶಕ್ತಿ ಬೇಕು.
ಪರ್ವತ ಕ್ಷೇತ್ರ ತುಂಗನಾಥ ದೇವಾಲಯ
ತುಂಗನಾಥ ದೇವಾಲಯವು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಮತ್ತೊಂದು ಗಿರಿಧಾಮವಾಗಿದೆ. ಈ ಕ್ಷೇತ್ರಕ್ಕೆ ಒಂದು ವಿಶೇಷತೆ ಇದೆ. ತುಂಗನಾಥ ಕ್ಷೇತ್ರವು ವಿಶ್ವದ ಅತಿ ಎತ್ತರದ ಶಿವ ದೇವಾಲಯವಾಗಿದೆ. ಇದು ಹಿಮಾಲಯದಲ್ಲಿ 3,680 ಮೀಟರ್ ಎತ್ತರದಲ್ಲಿದೆ. ಈ ದೈವಿಕ ದೇವಾಲಯವನ್ನು ಸುಮಾರು ಸಾವಿರ ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಭಕ್ತರು ನಂಬುತ್ತಾರೆ.
ಅಮರನಾಥ ದೇವಾಲಯ
3 ಸಾವಿರದ 888 ಮೀಟರ್ ಎತ್ತರದಲ್ಲಿರುವ ಅಮರನಾಥ ಮಂಜಿನ ಶಿವಲಿಂಗವನ್ನು ತಲುಪುವುದು ಸಾಹಸವೇ ಸರಿ. ಈ ಗುಹೆಯಲ್ಲಿ ಹಲವು ರಹಸ್ಯಗಳು ಅಡಗಿವೆ ಎನ್ನುತ್ತಾರೆ. ದೇವಸ್ಥಾನ ತಲುಪಲು ಚಾರಣ ಮಾರ್ಗ ಸವಾಲಿನದ್ದು. ಆದರೆ ಅದು ಹಿಮಾಲಯದ ಆ ಗುಹೆಯಲ್ಲಿದ್ದ ಹಿಮ ಶಿವಲಿಂಗ ದರ್ಶನವಾದ ಕೂಡಲೇ ಅಲ್ಲಿನ ವಾತಾವರಣದಿಂದ ಆ ದಣಿವೆಲ್ಲ ಮಾಯವಾಗುತ್ತದೆ.
ಪರಸ್ನಾಥ್ ಬೆಟ್ಟದ ಮೇಲಿರುವ ಶಿಖರ್ ಜಿ ದೇವಸ್ಥಾನ
ಜೈನರಿಗೆ ಅತ್ಯಂತ ಪವಿತ್ರವಾದ ಸ್ಥಳವಾದ ಶಿಖರ್ ಜಿ ದೇವಾಲಯವು ಪರಸ್ನಾಥ್ ಬೆಟ್ಟದಲ್ಲಿದೆ. 1350 ಮೀಟರ್ ಎತ್ತರದಲ್ಲಿದೆ. ಒಟ್ಟು 24 ಜೈನ ತೀರ್ಥಂಕರರಲ್ಲಿ 20 ಮಂದಿ ಮೋಕ್ಷವನ್ನು ಪಡೆದ ಸ್ಥಳ ಎಂದು ಹೇಳುತ್ತಾರೆ. ಆದ್ದರಿಂದ ಈ ದೇವಾಲಯಕ್ಕೆ ಜೈನ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಮತ್ತು ವಿಶಿಷ್ಟತೆ ಇದೆ. ಈ ಶಿಖರ್ ಜಿ ಈ ದೇವಾಲಯವನ್ನು ತೀರ್ಥರಾಜ್ ಎಂದೂ ಕರೆಯುತ್ತಾರೆ. ಈ ದೇವಾಲಯವನ್ನು ತಲುಪಲು ಮಧುಬನ್ನಿಂದ 28 ಕಿಲೋಮೀಟರ್ಗಳಷ್ಟು ಚಾರಣ ಮಾಡಬೇಕು. ಈ ಮಾರ್ಗವೂ ಕಡಿದಾಗಿದೆ.
ವಿಶ್ವದ ಅತಿ ಎತ್ತರದ ಮಠಗಳಲ್ಲಿ ಒಂದು ಫುಗ್ತಾಲ್ ಮಠ
ಲಡಾಖ್ ನಲ್ಲಿ 3 ಸಾವಿರದ 850 ಮೀಟರ್ ಎತ್ತರದಲ್ಲಿ ಜಗತ್ತಿನ ಅತ್ಯಂತ ಭವ್ಯವಾದ ಮಠಗಳಲ್ಲಿ ಒಂದೆಂದು ಹೇಳಲಾಗುವ ಫುಗ್ತಾಲ್ ಮಠವಿದೆ. ಬೆಟ್ಟದ ಮಧ್ಯದಲ್ಲಿ ಇರುವುದು ಇದರ ವಿಶೇಷತೆ. ಇದು ಲಡಾಖ್ನ ಝನ್ಸ್ಕರ್ ಪ್ರದೇಶದ ಪಾಡುಮ್ ಬಳಿ ಇದೆ. ಇಲ್ಲಿಗೆ ತಲುಪಲು ಪಡುಮ್-ಮನಾಲಿ ಟ್ರೆಕ್ಕಿಂಗ್ ಮಾರ್ಗದಿಂದ 7 ಕಿಲೋಮೀಟರ್ ನಡೆಯಬೇಕು ಈ ಎಲ್ಲಾ ದೇವಾಲಯಗಳಿಗೆ ಭೇಟಿ ನೀಡಬೇಕಾದರೆ ಮಾನಸಿಕ ಸ್ಥೈರ್ಯ ಜೊತೆಗೆ ಆರೋಗ್ಯವೂ ಬೇಕು.