ಕುರಾನ್‌ನಲ್ಲಿ ಮಾತ್ರವಲ್ಲ, ಭಗವಾನ್ ಕೃಷ್ಣನೂ ಅರ್ಜುನನಿಗೆ ಜಿಹಾದ್ ಬಗ್ಗೆ ಪಾಠಗಳನ್ನು ನೀಡಿದ್ದಾನೆ: ಮಾಜಿ ಗೃಹ ಸಚಿವ ಶಿವರಾಜ್‌ ಪಾಟೀಲ್‌ ವಿವಾದಾತ್ಮಕ ಹೇಳಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೆಹಲಿಯಲ್ಲಿ ಗುರುವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಜಿಹಾದ್ ಕುರಿತು ಹೇಳಿಕೆ ನೀಡಿ ವಿವಾದವನ್ನು ಹುಟ್ಟುಹಾಕಿದ್ದಾರೆ. ಜಿಹಾದ್ ಪರಿಕಲ್ಪನೆಯನ್ನು ಗೀತೆಯಲ್ಲಿ ಉಲ್ಲೇಖಿಸಲಾಗಿದೆ ಎಂದ ಅವರು, ಮಹಾಭಾರತ ಯುದ್ಧದ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಜಿಹಾದ್ ಬಗ್ಗೆ ಪಾಠಗಳನ್ನು ನೀಡಿದ್ದಾನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಹಿರಿಯ ಹಾಗೂ ಮಾಜಿ ಕೇಂದ್ರ ಸಚಿವ ಮೊಹ್ಸಿನಾ ಕಿದ್ವಾಯಿ ಅವರ ಜೀವನ ಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಪಾಟೀಲ್, “ಇಸ್ಲಾಂನಲ್ಲಿ ಜಿಹಾದ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತದೆ. ಎಲ್ಲಾ ಪ್ರಯತ್ನಗಳ ನಂತರವೂ ಬಲಪ್ರಯೋಗವನ್ನು ಮಾಡಬಹುದು ಎಂಬ ಶುದ್ಧ ಕಲ್ಪನೆ ಯಾರಿಗದರೂ ಅರ್ಥವಾಗಿಲ್ಲವೆಂದರೆ ಇದನ್ನು ಕುರಾನ್ ಮತ್ತು ಗೀತೆಯಲ್ಲಿ ಉಲ್ಲೇಖಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

“ಶ್ರೀ ಕೃಷ್ಣನು ಮಹಾಭಾರತದಲ್ಲಿ ಗೀತೆಯ ಒಂದು ಭಾಗದಲ್ಲಿ ಅರ್ಜುನನಿಗೆ ಜಿಹಾದ್ ಪಾಠಗಳನ್ನು ನೀಡಿದ್ದಾನೆ” ಎಂದು ಅವರು ತಮ್ಮ ಭಾಷಣದ ವೇಳೆ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್‌ ಹಿರಿಯ ನಾಯಕರಾಗಿರುವ ಶಿವರಾಜ್ ಪಾಟೀಲ್ ಅವರು 2004 ರಿಂದ 2008 ರವರೆಗೆ ಕೇಂದ್ರ ಗೃಹ ಸಚಿವರಾಗಿದ್ದರು ಮತ್ತು 1991 ರಿಂದ 1996 ರವರೆಗೆ ಲೋಕಸಭೆಯ 10 ನೇ ಸ್ಪೀಕರ್ ಆಗಿದ್ದರು. ಅವರು ಪಂಜಾಬ್ ರಾಜ್ಯದ ರಾಜ್ಯಪಾಲರಾಗಿದ್ದರು ಮತ್ತು 2010 ರಿಂದ 2015 ರವರೆಗೆ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದ ಆಡಳಿತಗಾರರಾಗಿದ್ದರು.

ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಮತ್ತು ದಿಗ್ವಿಜಯ ಸಿಂಗ್, ಫಾರೂಕ್ ಅಬ್ದುಲ್ಲಾ ಮತ್ತು ಸುಶೀಲ್ ಕುಮಾರ್ ಶಿಂಧೆ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!