ಹೊಸದಿಗಂತ ಡಿಜಿಟಲ್ ಡೆಸ್ಕ್
ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಮಟ್ಟಿಗೆ ಬೆಳೆದು ನಿಂತಿದೆ. ಕನ್ನಡನಾಡಿಗೆ ಕೆಂಪೇಗೌಡರ ಕೊಡುಗೆಗಳನ್ನು ಗೌರವಿಸಿ, ದೇವನಹಳ್ಳಿ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ನ.11ರಂದು ಲೋಕಾರ್ಪಣೆ ಮಾಡಲಿದ್ದಾರೆ. ಈ ಪ್ರತಿಮೆ ನಿರ್ಮಾಣವಾಗುತ್ತಿರುವ ಕೆಂಪೇಗೌಡರ ಥೀಮ್ ಪಾರ್ಕ್ ನಿರ್ಮಾಣಕ್ಕೆ ನಾಡಿನಾದ್ಯಂತ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹಣ ಅಭಿಯಾನಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಇಂದು (ಶುಕ್ರವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚಾಲನೆ ನೀಡಲಾಗಿದೆ.
ಬೆಂಗಳೂರು ನಿರ್ಮಾತೃ ನಾಡಪ್ರಭು ಶ್ರೀ ಕೆಂಪೇಗೌಡರ ಥೀಮ್ ಪಾರ್ಕ್ ನಿರ್ಮಾಣಕ್ಕೆ ನಾಡಿನಾದ್ಯಂತ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು. #ಪ್ರಗತಿಯಪ್ರತಿಮೆ #StatueofProsperity@BSBommai pic.twitter.com/zcvm0hOo8B
— CM of Karnataka (@CMofKarnataka) October 21, 2022
ಅಭಿಯಾನದ ಪ್ರಯುಕ್ತ ರಾಜ್ಯದ ಪ್ರತಿಯೊಂದು ಗ್ರಾಮದ ಕೆರೆಕಟ್ಟೆ, ಕಲ್ಯಾಣಿ, ನದಿ, ಪುಷ್ಕರಣಿ, ಪುಣ್ಯ ಪುರುಷರ ಸಮಾಧಿ ಸ್ಥಳಗಳಿಂದ ಪವಿತ್ರವಾದ ಮಣ್ಣನ್ನು ಸಂಗ್ರಹಿಸಲಾಗುವುದು. ಪವಿತ್ರ ಮೃತ್ತಿಕೆಯನ್ನು ವಿಮಾನ ನಿಲ್ದಾಣ ಆವರಣದಲ್ಲಿ ಅಭಿವೃದ್ಧಿಪಡಿಸುತ್ತಿರುವ 23 ಎಕರೆ ವಿಶಾಲವಾದ ಕೆಂಪೇಗೌಡ ಥೀಮ್ ಪಾರ್ಕ್ನಲ್ಲಿ ಬಳಸಿಕೊಳ್ಳಲಾಗುವುದು.
ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಶ್ರೀ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಆರಗ ಜ್ಞಾನೇಂದ್ರ, ಆರ್.ಅಶೋಕ್, ಅಶ್ವಥ್ ನಾರಾಯಣ್, ಸುಧಾಕರ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.