ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರಿಗೆ ಶ್ರೀನಗರದಲ್ಲಿರುವ ಅಧಿಕೃತ ಸರ್ಕಾರಿ ವಸತಿ ಫೇರ್‌ವ್ಯೂ ನಿವಾಸವನ್ನು ತೆರವು ಮಾಡುವಂತೆ ನೋಟಿಸ್ ನೀಡಲಾಗಿದೆ.
2019 ರಲ್ಲಿ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಮಾಜಿ ಮುಖ್ಯಮಂತ್ರಿಗಳಿಗೆ ಖಾತರಿಪಡಿಸಿದ ಜೀವಾವಧಿಯ ಸವಲತ್ತುಗಳನ್ನು ಸಹ ಹಿಂಪಡೆಯಲಾಗಿದೆ. 2020 ರಲ್ಲಿ, ಜಮ್ಮು ಮತ್ತು ಕಾಶ್ಮೀರದ ಇಬ್ಬರು ಮಾಜಿ ಸಿಎಂಗಳಾದ ಒಮರ್ ಅಬ್ದುಲ್ಲಾ ಮತ್ತು ಗುಲಾಂ ನಬಿ ಆಜಾದ್ ಈಗಾಗಲೇ ತಮ್ಮ ಅಧಿಕೃತ ನಿವಾಸಗಳನ್ನು ತೊರೆದಿದ್ದರು.
ಮುಫ್ತಿ ಅವರ ತಂದೆ ದಿವಂಗತ ಮುಹಮ್ಮದ್ ಸಯೀದ್ ಅವರು 2005 ರಲ್ಲಿ ಜಮ್ಮು ಮತ್ತು ಕಾಶ್ಮೀರ ಸಿಎಂ ಆಗಿದ್ದರು. ಮೊಹಮದ್ ಸಯೀದ್ ನಿಧನರಾದ ಬಳಿಕವೂ ಮೆಹಬೂಬಾ ಮಫ್ತಿ ಇಲ್ಲಿ ವಾಸಿಸುತ್ತಿದ್ದರು.
‘ಫೇರ್ ವ್ಯೂನಿಂದ ಹೊರಹಾಕುವ ಸೂಚನೆಯನ್ನು ಕೆಲವು ದಿನಗಳ ಹಿಂದೆ ನನಗೆ ನೀಡಲಾಗಿತ್ತು. ಇದು ಆಶ್ಚರ್ಯವೇನಿಲ್ಲ ಮತ್ತು ನಿರೀಕ್ಷಿತವಾಗಿಯೇ ಇತ್ತು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
ಈ ಬಂಗಲೆಯು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಾಗಿ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆಯಾದರೂ, ಅದು ನಿಜವಲ್ಲ ಎಂದು ಅವರು ಹೇಳಿದರು.
ನನ್ನ ತಂದೆಗೆ (ಮುಫ್ತಿ ಮೊಹಮ್ಮದ್ ಸಯೀದ್) ಡಿಸೆಂಬರ್ 2005 ರಲ್ಲಿ ಅವರು ಮುಖ್ಯಮಂತ್ರಿ ಕಚೇರಿಯನ್ನು ಬಿಟ್ಟುಕೊಟ್ಟ ನಂತರ ಈ ಸ್ಥಳವನ್ನು ಹಂಚಲಾಯಿತು. ಆದ್ದರಿಂದ ಆಡಳಿತವು ಉಲ್ಲೇಖಿಸಿದ ಆಧಾರಗಳು ಸರಿಯಾಗಿಲ್ಲ ಎಂದು ಮುಫ್ತಿ ಹೇಳಿದ್ದಾರೆ.