ಹೊಸದಿಗಂತ ವರದಿ, ಮದ್ದೂರು :
ವಿದ್ಯುತ್ ಟ್ರಾನ್ಸ್ ಫಾರ್ಮೆರ್ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ ಮೂವರು ಪ್ರಯಾಣಿಕರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿರುವ ಘಟನೆ ತಾಲೂಕಿನ ಚಾಪೂರದೊಡ್ಡಿ ಗ್ರಾಮ ಸಮೀಪದ ಬೆಳ್ತೂರು ಗೇಟ್ ಬಳಿ ಗುರುವಾರ ರಾತ್ರಿ ಜರುಗಿದೆ.
ಕಾರು ಚಾಲನೆ ಮಾಡುತ್ತಿದ್ದ ಬೆಂಗಳೂರಿನ ಹಿತೇಷ್ ಸೇರಿದಂತೆ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿದ್ದವರು ಬೆಂಗಳೂರಿನಿಂದ ಡಣಾಯಕನಪುರಕ್ಕೆ ತೆರಳುತ್ತಿದ್ದರು. ರಾತ್ರಿ 11.30 ಸುಮಾರಿಗೆ ಚಾಪುರದೊಡ್ಡಿ ಬಳಿಯ ಬೆಳ್ತೂರು ಗೇಟ್ ಬಳಿ ಕಾರು ಚಾಲನೆ ಮಾಡುತ್ತಿದ್ದ ಹಿತೇಷ್ ಕಾರಿನ ಮುಂಭಾಗದ ಚಕ್ರ ಹಳ್ಳಕ್ಕೆ ರಸ್ತೆ ಗುಂಡಿಗೆ ಬೀಳುವುದನ್ನು ತಪ್ಪಿಸಲು ಹೋದಾಗ ಪಂಚರ್ ಆದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಟ್ರಾನ್ಸ್ ಫಾರ್ಮೆರ್ ಗೆ ಡಿಕ್ಕಿ ಹೊಡೆದು ಟ್ರಾನ್ಸ್ ಫಾರ್ಮೆರ್ ಸಹಿತ ವಿದ್ಯುತ್ ಕಂಬಗಳು ಕಾರಿನ ಮೇಲೆ ಬಿದ್ದು ಅನಾಹುತ ಸಂಭವಿಸಿದೆ.
ಕಾರಿನ ಚಾಲಕ ಹಿತೇಶ್ ಸೆಸ್ಕಾಂ ಕಚೇರಿಗೆ ಧಾವಿಸಿ ಹಾನಿಗೊಳಗಾದ ಟ್ರಾನ್ಸ್ ಫಾರ್ಮೆರ್ ಮತ್ತು ವಿದ್ಯುತ್ ಕಂಬಗಳಿಗೆ ಆಗಿರುವ ನಷ್ಟ ಭರಿಸುವುದಾಗಿ ಲಿಖಿತ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಸೆಸ್ಕಾಂ ಜೆಇ ಸಂತೋಷ್ ನೀಡಿದ ದೂರಿನ ಮೇರೆಗೆ ಬೆಸಗರಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.