ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುನೀತ್ ರಾಜ್ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಪ್ರೀ-ರಿಲೀಸ್ ಇವೆಂಟ್ ‘ಪುನೀತ ಪರ್ವ’ ನಡೆಯುತ್ತಿದ್ದು, ಈ ಕಾರ್ಯಕ್ರಮಕ್ಕೆ ಹಲವು ಸೆಲೆಬ್ರಿಟಿಗಳು, ಲಕ್ಷಾಂತರ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.
ಈ ವೇದಿಕೆ ಮೇಲೆ ರಾಘವೇಂದ್ರ ರಾಜ್ಕುಮಾರ್ ಅವರು ವಿಶೇಷ ಕಥೆ ಹೇಳಿದ್ದಾರೆ.
ಪುನೀತ್ ಕುರಿತು ಹೇಳಲು ಸುರು ಮಾಡಿದ ರಾಘವೇಂದ್ರ, 1981ರಲ್ಲಿ ರಿಲೀಸ್ ಆದ ‘ಭಾಗ್ಯವಂತ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಪುನೀತ್ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದರು. ಈ ಚಿತ್ರದ ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ..’ ಹಾಡು ಈಗಲೂ ಅನೇಕರ ಫೇವರಿಟ್ ಹಾಡು. ಈ ಹಾಡನ್ನು ಸ್ವತಃ ಪುನೀತ್ ರಾಜ್ಕುಮಾರ್ ಅವರು ಹಾಡಿದ್ದರು. ಈ ಹಾಡಿನ ಕುರಿತು ರಾಘವೇಂದ್ರ ರಾಜ್ಕುಮಾರ್ ನೆನಪುಗಳನ್ನು ತೆರೆದಿಟ್ಟಿದ್ದಾರೆ.
1980ರ ಸಮಯ. ನನ್ನ ತಮ್ಮನಿಗೆ 5 ವರ್ಷವೂ ಆಗಿರಲಿಲ್ಲ. ಅಪ್ಪು ಬಳಿ ಹಾಡಿಸಬೇಕು ಎಂಬುದು ಅಪ್ಪಾಜಿ ಅವರ ಆಸೆ ಆಗಿತ್ತು. ಇಷ್ಟು ಸಣ್ಣವನ ಬಳಿ ಯಾಕೆ ಹಾಡಿಸಬೇಕು ಅಂತ ಪ್ರಶ್ನೆ ಬಂತು. ಭಾಗ್ಯವಂತರು ಸಿನಿಮಾದಲ್ಲಿ ಒಂದು ಹಾಡಿತ್ತು. ಇದನ್ನು ಪುನೀತ್ ಹಾಡಿದರೆ ಚೆನ್ನಾಗಿರುತ್ತದೆ ಎಂದು ಅಮ್ಮನ ಬಳಿ ಅಪ್ಪಾಜಿ ಹೇಳಿದರು. ಮಲಗುವುದಕ್ಕೂ ಮೊದಲು ಈ ಹಾಡನ್ನು ನಮ್ಮ ತಂದೆ ಹೇಳುತ್ತಿದ್ದರು. ಪುನೀತ್ ಧ್ವನಿಗೂಡಿಸುತ್ತಿದ್ದನು. ಹೀಗೆ ಅವನಿಗೆ ಹಾಡು ರೂಢಿ ಆಯಿತು.
ಸ್ಟುಡಿಯೋದಲ್ಲಿ ಈ ಹಾಡು ಹೇಳುವ ದಿನ ಬಂತು. ಅಪ್ಪಾಜಿ ಶೂಟಿಂಗ್ನಲ್ಲಿ ಇದ್ದ ಕಾರಣ ಸ್ಟುಡಿಯೋಗೆ ಬಂದಿರಲಿಲ್ಲ. ಟೆಲಿಫೋನ್ಬೂತ್ಗೆ ಆಗಾಗ ಬಂದು ಅಪ್ಪು ಹಾಡಿದ್ನ ಎಂದು ಕೇಳುತ್ತಿದ್ದರು. ಚೆನ್ನಾಗಿ ಹಾಡಿದ ಎಂದು ಅಮ್ಮ ಹೇಳಿದರು. ಮರುದಿನ ಮನೆಗೆ ಬಂದು ಅಪ್ಪಾಜಿ ಖುಷಿಪಟ್ಟರು.
ಈ ಹಾಡಿನ ಶೂಟಿಂಗ್ ಸಂದರ್ಭದಲ್ಲಿ ನಾನು ಅಪ್ಪು ಜತೆ ಇದ್ದೆ. ಈ ಹಾಡಿನ ಶೂಟ್ 3 ದಿನ ನಡೆಯಿತು. ನಾನಿರುವವರೆಗೂ ಈ ಹಾಡು ನನ್ನ ಜತೆ ಇರುತ್ತದೆ ಎಂದು ಭಾವುಕರಾದರು ರಾಘವೇಂದ್ರ ರಾಜ್ಕುಮಾರ್. ನಂತರ ಈ ಹಾಡನ್ನು ಹಾಡಿದರು.