ಹೊಸದಿಗಂತ ವರದಿ, ಮಂಡ್ಯ:
ಜಿಲ್ಲಾ ಹಾಲು ಒಕ್ಕೂಟ ಉತ್ಪಾದಕರಿಗೆ ಪ್ರತೀ ಲೀಟರ್ ಹಾಲಿಗೆ 1 ರೂ. ಹೆಚ್ಚಿಸುವ ಮೂಲಕ ರೈತರಿಗೆ ದೀಪಾವಳಿ ಕೊಡುಗೆ ನೀಡಿದೆ.
ಅ. 21ರಂದು ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಹಾಲು ಖರೀದಿ ದರವನ್ನು ನ. 1ರಿಂದ 2023 ಮಾ. 31ರವರೆಗೆ ಜಾರಿಗೆ ಬರುವಂತೆ ರೈತರಿಂದ ಖರೀದಿಸುವ ಪ್ರತೀ ಲೀಟರ್ ಹಾಲಿಗೆ 1 ರೂ. ಹೆಚ್ಚಿಸಿ ಹೊಸದಾಗಿ ದರ ಪರಿಷ್ಕರಿಸಲಾಗಿದೆ.
ಶೇ. 4 ಜಿಡ್ಡು ಮತ್ತು ಶೇ. 8.5ರಷ್ಟು ಜಿಡ್ಡೇತರ ಘನಾಂಶವಿರುವ ಹಾಲಿಗೆ ಪ್ರಸ್ತುತ ಸಂಘಗಳಿಗೆ 29.15 ರೂ. ನೀಡಲಾಗುತ್ತಿದ್ದುಘಿ, ನ. 1ರಿಂದ 30.15 ರೂ. ನೀಡಲಾಗುವುದು.
ಉತ್ಪಾದಕರಿಗೆ ಪ್ರಸ್ತುತ 28.25 ರೂ. ನೀಡಲಾಗುತ್ತಿದ್ದುಘಿ, ಈ ದರವನ್ನು 29.25 ರೂ.ಗೆ ಹೆಚ್ಚಿಸಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಕ್ಕೂಟದ ವ್ಯಾಪ್ತಿಯಲ್ಲಿ ನಿತ್ಯ 9.84 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಪ್ರಸ್ತುತ ಮಳೆಯಿಂದಾಗಿ ಹಾಲು ಶೇಖರಣೆ ಪ್ರಮಾಣದಲ್ಲಿ ಕಡಿಮೆಯಾಗುತ್ತಿದ್ದುಘಿ, ಇತ್ತೀಚಿನ ದಿನಗಳಲ್ಲಿ ಹಸಿರು ಮೇವಿನ ಕೊರತೆ ಹಾಗೂ ಇತರೆ ಕಾರಣಗಳಿಂದ ಹಾಲು ಉತ್ಪಾದನಾ ವೆಚ್ಚ ಅಧಿಕವಾಗಿದೆ. ಒಕ್ಕೂಟದ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರಕಿ ಆರ್ಥಿಕವಾಗಿ ಸುಸ್ಥಿತಿಯಲ್ಲಿದೆ.
ಇದನ್ನು ಗಮನದಲ್ಲಿಟ್ಟುಕೊಂಡು ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುವ ಅಗತ್ಯತೆ ಇರುವುದರಿಂದ ಖರೀದಿ ದರವನ್ನು ಪ್ರತೀ ಲೀಟರ್ ಹಾಲಿಗೆ 1 ರೂ. ಹೆಚ್ಚಿಸಿರುವುದಾಗಿ ಅವರು ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ