Tuesday, January 13, 2026
Tuesday, January 13, 2026
spot_img

ಗ್ರಾಮೀಣ ಭಾಗದ ಆಶಾಕಿರಣ: KMC ತುರ್ತು ಘಟಕದ ತ್ವರಿತ ಚಿಕಿತ್ಸೆಯಿಂದ ಮಹಿಳೆಗೆ ಪುನರ್ಜನ್ಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತುರ್ತು ವೈದ್ಯಕೀಯ ಪರಿಸ್ಥಿತಿಯಲ್ಲಿ ಪ್ರತಿ ನಿಮಿಷವೂ ಎಷ್ಟು ಮೌಲ್ಯಯುತ ಎಂಬುದಕ್ಕೆ ಸಾಕ್ಷಿಯಾಗಿ, ಶ್ರೀ ಕೃಷ್ಣ ಆಸ್ಪತ್ರೆಯ ಕೆಎಂಸಿ ತುರ್ತು ಚಿಕಿತ್ಸಾ ಘಟಕದ ವೈದ್ಯರು ಮಧ್ಯ ವಯಸ್ಸಿನ ಮಹಿಳೆಯೊಬ್ಬರ ಜೀವವನ್ನು ಉಳಿಸಿದ್ದಾರೆ. ಮೂರು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದ ರೋಗಿಯ ಪ್ರಾಣವನ್ನು ರಕ್ಷಿಸುವ ಮೂಲಕ ಗ್ರಾಮೀಣ ಆರೋಗ್ಯ ಕೇಂದ್ರದ ಮಹತ್ವವನ್ನು ಈ ಪ್ರಕರಣ ಎತ್ತಿ ತೋರಿಸಿದೆ.

ಪ್ರಕರಣದ ವಿವರ

ಮಧ್ಯ ವಯಸ್ಸಿನ ಮಹಿಳೆಯು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಾ ಶ್ರೀ ಕೃಷ್ಣ ಆಸ್ಪತ್ರೆಯ ತುರ್ತು ಘಟಕಕ್ಕೆ ದಾಖಲಾಗಿದ್ದರು. ಆಸ್ಪತ್ರೆಗೆ ಬಂದ ಕೆಲವೇ ನಿಮಿಷಗಳಲ್ಲಿ ಅವರಿಗೆ ಮೊದಲ ಹೃದಯಾಘಾತ ಸಂಭವಿಸಿತು. ತುರ್ತು ವಿಭಾಗದ ತಜ್ಞ ವೈದ್ಯರು ತಕ್ಷಣವೇ ಕಾರ್ಯಪ್ರವೃತ್ತರಾದರು. ಇದಾದ ನಂತರವೂ ರೋಗಿಗೆ ಮತ್ತೆರಡು ಬಾರಿ ಹೃದಯಾಘಾತವಾಗಿದ್ದು, ತಜ್ಞರ ತಂಡವು ವಿಳಂಬವಿಲ್ಲದೆ ಮೂರು ಸುತ್ತುಗಳ CPR ಅನ್ನು ಯಶಸ್ವಿಯಾಗಿ ನಿರ್ವಹಿಸಿ, ಅವರ ಎದೆಬಡಿತವನ್ನು ಪುನರುಜ್ಜೀವನಗೊಳಿಸಿತು.

ರೋಗಿಯನ್ನು ತಕ್ಷಣವೇ ವೆಂಟಿಲೇಟರ್ ಬೆಂಬಲಕ್ಕೆ ಒಳಪಡಿಸಲಾಯಿತು. ಅವರ ಆರೋಗ್ಯ ಸ್ಥಿತಿ ಸ್ಥಿರಗೊಂಡ ಕೂಡಲೇ ಹೆಚ್ಚಿನ ಮತ್ತು ಸುಧಾರಿತ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಯಿತು.

ಚಿಕಿತ್ಸೆಯ ಸವಾಲುಗಳು

ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿನ ತಪಾಸಣೆಯಲ್ಲಿ, ಅವರ ರಕ್ತದಲ್ಲಿ ಅಧಿಕ ಪ್ರಮಾಣದ ಕಾರ್ಬನ್ ಡೈಆಕ್ಸೈಡ್, ರೆಸ್ಪಿರೇಟರಿ ಆಸಿಡೋಸಿಸ್ ಮತ್ತು ಹೃತ್ಕರ್ಣದ ಕಂಪನ ಇರುವುದು ದೃಢಪಟ್ಟಿತು. ವೈದ್ಯರ ತಂಡವು ತಕ್ಷಣವೇ ಇಂಟ್ರಾವೆನಸ್ ಆ್ಯಂಟಿಬಯೊಟಿಕ್ಸ್‌ಗಳೊಂದಿಗೆ ಚಿಕಿತ್ಸೆಯನ್ನು ಪ್ರಾರಂಭಿಸಿತು ಮತ್ತು ಔಷಧಿಗಳ ಮೂಲಕ ಹೃತ್ಕರ್ಣದ ಕಂಪನವನ್ನು ನಿಯಂತ್ರಿಸಲಾಯಿತು. ನಿರಂತರ ನಿಗಾ ಮತ್ತು ತೀವ್ರ ಆರೈಕೆಯಿಂದ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ಗ್ರಾಮೀಣ ತುರ್ತು ಘಟಕಗಳ ಪಾತ್ರ

ಈ ಪ್ರಕರಣವು ಗ್ರಾಮಾಂತರ ಪ್ರದೇಶದಲ್ಲಿರುವ ತುರ್ತು ಚಿಕಿತ್ಸಾ ಘಟಕಗಳ ಜೀವ ಉಳಿಸುವ ಸಾಮರ್ಥ್ಯವನ್ನು ಒತ್ತಿ ಹೇಳುತ್ತದೆ. ಮೂಲಸೌಕರ್ಯಗಳು ಸೀಮಿತವಾಗಿದ್ದರೂ, ಕಕ್ಕಿಂಜೆಯ ಆಸ್ಪತ್ರೆಯು ತಕ್ಷಣದ ಪುನರುಜ್ಜೀವನ ಚಿಕಿತ್ಸೆ ಮತ್ತು ರೋಗಿಯನ್ನು ಉನ್ನತ ಕೇಂದ್ರಕ್ಕೆ ರವಾನಿಸಲು ಕುಟುಂಬಸ್ಥರು ಕ್ಷಿಪ್ರವಾಗಿ ನಿರ್ಧಾರ ತೆಗೆದುಕೊಂಡದ್ದು, ಅವರ ಜೀವ ಉಳಿಯಲು ನಿರ್ಣಾಯಕ ಅಂಶವಾಯಿತು.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ವಿಭಾಗದ ಕನ್ಸಲ್ಟೆಂಟ್‌ ಡಾ. ಬಸವಪ್ರಭು ಅವರು, “ಗ್ರಾಮೀಣ ಭಾಗದಲ್ಲಿ ಸಕಾಲಿಕ ಚಿಕಿತ್ಸೆಯ ಮಹತ್ವವನ್ನು ಈ ಪ್ರಕರಣ ವಿವರಿಸುತ್ತದೆ. ಕಕ್ಕಿಂಜೆಯಲ್ಲಿ ನೀಡಲಾದ CPR ಮತ್ತು ಉಸಿರಾಟದ ನಿರ್ವಹಣೆಯು ಹೆಚ್ಚಿನ ಚಿಕಿತ್ಸೆಗೆ ದಾರಿ ಮಾಡಿಕೊಟ್ಟಿತು. ಈ ನೆರವು ಸಿಗದಿದ್ದರೆ, ರೋಗಿಯ ಜೀವ ಉಳಿಸುವುದು ಅಸಾಧ್ಯವಾಗುತ್ತಿತ್ತು” ಎಂದು ಅಭಿಪ್ರಾಯಪಟ್ಟರು.

ಕೆಎಂಸಿ ಆಸ್ಪತ್ರೆಯ ತುರ್ತು ಮೆಡಿಸಿನ್ ವಿಭಾಗದ ಕ್ಲಸ್ಟರ್ ಮುಖ್ಯಸ್ಥ ಡಾ. ಜೀಧು ರಾಧಾಕೃಷ್ಣನ್ ಅವರು, “ಗ್ರಾಮೀಣ ತುರ್ತು ಘಟಕಗಳು ರೋಗಿಯ ಜೀವ ರಕ್ಷಣೆಯಲ್ಲಿ ‘ಮೊದಲ ಸಾಲಿನ ರಕ್ಷಣೆ’ಯಾಗಿ ನಿಲ್ಲುತ್ತವೆ. ಕ್ಷಿಪ್ರವಾಗಿ ರೋಗಿಯ ಸ್ಥಿರೀಕರಣ ಮತ್ತು ಉನ್ನತ ಕೇಂದ್ರಕ್ಕೆ ರವಾನೆ ಮಾಡುವ ತ್ವರಿತ ನಿರ್ಧಾರವೇ ಮಹಿಳೆಯ ಯಶಸ್ಸಿನ ಕಥೆಯಾಗಿದೆ” ಎಂದರು.

ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯ ತುರ್ತು ಘಟಕ ಮತ್ತು ಮಂಗಳೂರು ಕೆಎಂಸಿ ಆಸ್ಪತ್ರೆಯ ಸುಧಾರಿತ ಆರೈಕೆ ವಿಭಾಗದ ಒಗ್ಗಟ್ಟಿನ ಪ್ರಯತ್ನವು ಗ್ರಾಮೀಣ ಭಾಗದ ಜನರಿಗೂ ಸಕಾಲಿಕ ವೈದ್ಯಕೀಯ ಸೇವೆ ದೊರೆಯುವುದನ್ನು ಖಚಿತಪಡಿಸುತ್ತದೆ.

Most Read

error: Content is protected !!