ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ಹೊರವಲಯ ತೊಕ್ಕೊಟ್ಟಿನ ಪ್ರಸಿದ್ಧ ಹಣಕಾಸು ಸಂಸ್ಥೆಯೊಂದಕ್ಕೆ 916 ಹಾಲ್ ಮಾರ್ಕ್ ಚಿನ್ನವನ್ನೇ ಹೋಲುವ ನಕಲಿ ಆಭರಣಗಳನ್ನು ಅಡವಿಟ್ಟು ಲಕ್ಷಾಂತರ ರೂಪಾಯಿ ವಂಚಿಸಿದ್ದ ಖತರ್ನಾಕ್ ಗ್ಯಾಂಗ್‌ನ ಆರು ಮಂದಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿ, ಅವರ ವಂಚನೆಯ ಜಾಲವನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಓರ್ವ ಆರೋಪಿ ಮಾತ್ರ ತಲೆಮರೆಸಿಕೊಂಡಿದ್ದಾನೆ.
ಬಂಧಿತ ಆರೋಪಿಗಳ ವಿವರ
ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ವಿಕ್ರಮ್ ಅಮೃತ್ ಲಾಲ್ ಬಫ್ನ (48), ಹರೇಕಳದ ಮಹಮ್ಮದ್ ಇಸ್ಮಾಯಿಲ್ (35), ಮಹಮ್ಮದ್ ಮಿಸ್ಬಾ (30), ಸುರತ್ಕಲ್ ಕಾಟಿಪಳ್ಳದ ಉಮರ್ ಫಾರೂಕ್ (52), ಉಳ್ಳಾಲ ಮೇಲಂಗಡಿಯ ಇಮ್ತಿಯಾಝ್ (29), ಮತ್ತು ಮಂಚಿಲದ ಝಹೀಮ್ ಅಹ್ಮದ್ (20) ಎಂದು ಗುರುತಿಸಲಾಗಿದೆ. ಈ ಜಾಲದ ಮತ್ತೋರ್ವ ಸದಸ್ಯ, ಹೆಜಮಾಡಿಯ ನೌಫಾಲ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
ವಂಚನೆಯ ವಿವರ
ತೊಕ್ಕೊಟ್ಟಿನ ಕೇಂದ್ರ ಭಾಗದಲ್ಲಿ ‘ಗುರು ರಾಘವೇಂದ್ರ ಫೈನಾನ್ಸ್ & ಇನ್ವೆಸ್ಟ್ಮೆಂಟ್’ ಕಚೇರಿ ಹೊಂದಿರುವ, ಕಳೆದ 25 ವರ್ಷಗಳಿಂದ ಫೈನಾನ್ಸ್ ವ್ಯವಹಾರದಲ್ಲಿ ಅನುಭವ ಹೊಂದಿರುವ ದಿನೇಶ್ ರೈ ಕಳ್ಳಿಗೆ ಅವರೇ ಈ ವಂಚನೆಗೆ ಒಳಗಾದ ಫೈನಾನ್ಸ್ ಮಾಲಕರಾಗಿದ್ದಾರೆ.
ಮೊದಲ ವಂಚನೆ (ನವೆಂಬರ್ 22, ಶನಿವಾರ): ಸಂಜೆ 5 ಗಂಟೆಗೆ ನೌಫಾಲ್ ಮತ್ತು ಝಹೀಮ್ ಅಹ್ಮದ್ ಎಂಬವರು ಫೈನಾನ್ಸ್‌ಗೆ ಬಂದಿದ್ದರು. ಅವರು 41 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ನೀಡಿದರು. ಮಾಲೀಕ ದಿನೇಶ್ ರೈ ಮತ್ತು ಸಿಬ್ಬಂದಿ ನಿಕೇಶ್ ಅವರು ಆಭರಣಗಳನ್ನು ಪರಿಶೀಲಿಸಿದಾಗ, ಸರಗಳ ಕೊಂಡಿಯಲ್ಲಿ 916 ಶುದ್ಧತೆಯ ಸಂಕೇತವಿತ್ತು ಮತ್ತು ಓರೆ ಕಲ್ಲಿನಲ್ಲಿ ಉಜ್ಜಿದಾಗಲೂ ಅದು ಚಿನ್ನವೆಂದು ಕಂಡುಬಂದಿತ್ತು. ನಂಬಿದ ಫೈನಾನ್ಸ್ ಮಾಲೀಕರು ಝಹೀಮ್ ಅಹ್ಮದ್ ಹೆಸರಿನಲ್ಲಿ ಒಟ್ಟು ರೂ. 3,55,000 ಸಾಲ ನೀಡಿದರು.
ಎರಡನೇ ಯತ್ನ (ನವೆಂಬರ್ 24, ಸೋಮವಾರ): ಸಂಜೆ 5 ಗಂಟೆಗೆ ಇಮ್ತಿಯಾಝ್ ಎಂಬಾತ 55 ಗ್ರಾಂ ತೂಕದ ಎರಡು ಸರ ಮತ್ತು ಒಂದು ಬ್ರೇಸ್ಲೆಟ್ ಅಡವಿಟ್ಟು ರೂ. 4,80,000 ಸಾಲ ನೀಡುವಂತೆ ಕೇಳಿಕೊಂಡ. ಇವುಗಳ ಮೇಲೂ 916 ಸಂಕೇತವಿತ್ತು ಮತ್ತು ಓರೆ ಕಲ್ಲಿನಲ್ಲಿ ಚಿನ್ನವೆಂದೇ ಕಂಡುಬಂದಿತ್ತು. ಆಭರಣ ಎಲ್ಲಿಂದ ಖರೀದಿಸಿದ್ದು ಎಂದು ಕೇಳಿದಾಗ, ಆರೋಪಿ ದುಬೈ ಚಿನ್ನವೆಂದು ಹೇಳಿದ್ದನಂತೆ.
ಮಾಲೀಕರ ಸಮಯಪ್ರಜ್ಞೆ ಮತ್ತು ಸತ್ಯ ಬಯಲು
ಇಮ್ತಿಯಾಝ್‌ನ ಮಾತಿನಿಂದ ಅನುಮಾನಗೊಂಡ ಫೈನಾನ್ಸ್ ಮಾಲೀಕ ದಿನೇಶ್ ರೈ, ತಕ್ಷಣ ಸಮಯಪ್ರಜ್ಞೆ ಮೆರೆದರು. ಅವರು ತಕ್ಷಣ ಇಮ್ತಿಯಾಝ್ ನೀಡಿದ್ದ ಮತ್ತು ಹಿಂದೆ ಝಹೀಮ್ ಅಹ್ಮದ್ ಅಡವಿಟ್ಟಿದ್ದ ಆಭರಣಗಳ ಪರಿಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಮಂಗಳೂರಿನ ಚಿನ್ನದ ಕೆಲಸಗಾರ ಸ್ನೇಹಿತ ಉದಯ್ ಆಚಾರ್ಯ ಅವರಲ್ಲಿ ಪರೀಕ್ಷೆಗೆ ಒಪ್ಪಿಸಿದರು. ಪರೀಕ್ಷೆಯ ವೇಳೆ, ಆಭರಣಗಳನ್ನು ಆಸಿಡ್‌ನಲ್ಲಿ ಮುಳುಗಿಸಿ ಬಿಸಿ ಮಾಡಿದಾಗ ನೊರೆ ಬಂದಿದ್ದು, ಅವು ನಕಲಿ ಚಿನ್ನ ಎಂದು ಖಚಿತವಾಯಿತು. ದಿನೇಶ್ ರೈ ಅವರು ತಕ್ಷಣ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದರು. ಪೊಲೀಸರು ಮೊದಲು ಇಮ್ತಿಯಾಝ್‌ನನ್ನು ಬಂಧಿಸಿ, ಅವನ ಮಾಹಿತಿಯ ಆಧಾರದ ಮೇಲೆ ಉಳಿದ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಕಿಂಗ್‌ಪಿನ್ ಮಹಮ್ಮದ್ ಇಸ್ಮಾಯಿಲ್, ಮಹಾರಾಷ್ಟ್ರ ಮೂಲದ ವಿಕ್ರಮ್‌ನಿಂದ ಕಡಿಮೆ ಕ್ಯಾರೆಟ್‌ನ ನಕಲಿ ಚಿನ್ನವನ್ನು ತರಿಸಿ, ತನ್ನ ಸಹಚರರ ಮೂಲಕ ಅದನ್ನು ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟು ವಂಚನೆ ನಡೆಸುತ್ತಿದ್ದನೆಂದು ತಿಳಿದುಬಂದಿದೆ.
ಪೊಲೀಸ್ ತನಿಖೆ ಮತ್ತು ವಶಪಡಿಸಿಕೊಂಡ ವಸ್ತುಗಳುಬಂಧಿತ ಆರೋಪಿಗಳಿಂದ ಪೊಲೀಸರು ಆರು ಮೊಬೈಲ್ ಫೋನ್‌ಗಳು, 47,000 ರೂಪಾಯಿ ನಗದು ಮತ್ತು 9 ಕ್ಯಾರೆಟ್‌ನ 141 ಗ್ರಾಂ ನಕಲಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಆರೋಪಿಗಳು ಬೇರೆ ಹಣಕಾಸು ಸಂಸ್ಥೆಗಳಿಗೂ ವಂಚನೆ ನಡೆಸಿರುವ ಸಾಧ್ಯತೆ ಇದ್ದು, ಉಳ್ಳಾಲ ಪೊಲೀಸರು ಈ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ.

