ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರೋಗ್ಯ ಕೇಂದ್ರದಲ್ಲಿ ಒಂಟಿಯಾಗಿದ್ದ ನರ್ಸ್ ಮೇಲೆ 17 ವರ್ಷದ ಯುವಕ ಸೇರಿದಂತೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ಛತ್ತೀಸ್‌ಘಡದ ಮಹೇಂದ್ರಗಢ ಜಿಲ್ಲೆಯ ಚಿಪ್ಚಿಪಿ ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ಸಮೇತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಆರೋಗ್ಯ ಕೇಂದ್ರದ ಇತರೆ ಸಿಬ್ಬಂದಿ ದೀಪಾವಳಿ ಸಂದರ್ಭದಲ್ಲಿ ರಜೆಯ ಮೇಲೆ ತೆರಳಿದ್ದು, ಒಬ್ಬರೇ ನರ್ಸ್ ಕೆಲಸಕ್ಕೆ ಹಾಜರಾಗಿದ್ದರು. ಇದನ್ನು ಗಮನಿಸಿದ ಆರೋಪಿಗಳು ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರೋಗ್ಯ ಕೇಂದ್ರ ಪ್ರವೇಶಿಸಿ ನರ್ಸ್ ಬಾಯಿ ಮುಚ್ಚಿ, ಕಟ್ಟಿ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ಗಂಟೆಗಳ ಕಾಲ ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಘಟನೆಯನ್ನು ಸೆಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಜೊತೆಗೆ ಪೊಲೀಸರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಸಂತ್ರಸ್ತೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.
ಘಟನೆ ನಡೆದ ಬಳಿಕ ಸಂತ್ರಸ್ತ ಮಹಿಳೆ ಆರೋಗ್ಯ ಕೇಂದ್ರದಿಂದ ಐದು ಕಿಲೋಮೀಟರ್ ದೂರದಲ್ಲಿರುವ ತನ್ನ ಮನೆಗೆ ತೆರಳಿ ನಡೆದ ವಿಚಾರವನ್ನು ಪೋಷಕರಿಗೆ ತಿಳಿಸಿದ್ದಾಳೆ. ಕೂಡಲೇ ಪೊಲೀಸ್ ಠಾಣೆಗೆ ತೆರಳಿದ ಪೋಷಕರು ದೂರು ದಾಖಲಿಸಿದ್ದಾರೆ. ಪೊಲೀಸರು ಅಪ್ರಾಪ್ತ ವಯಸ್ಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಿಮೇಶ್ ಬಾರಯ್ಯ ತಿಳಿಸಿದ್ದಾರೆ.