ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂತಾರ ಎಲ್ಲೆಡೆ ಸದ್ದು ಮಾಡುತ್ತಿದ್ದುಚಿತ್ರಕ್ಕೆ ಅಭೂತಪೂರ್ವ ಮೆಚ್ಚುಗೆ ಎಲ್ಲೆಡೆ ವ್ಯಕ್ತವಾಗುತ್ತಿದೆ.
ಕನ್ನಡದಲ್ಲಿ ಯಶಸ್ಸು ಕಂಡಿದ್ದ ಕಾಂತಾರ ಇತರೆ ಭಾಷೆಗಳಲ್ಲಿಯೂ ಸಹ ಹಿಟ್ ಲಿಸ್ಟ್ ಸೇರಿದೆ. ಅದರಲ್ಲಿಯೂ ಬಾಲಿವುಡ್ ಸಿನಿಪ್ರೇಕ್ಷಕರು ಕಾಂತಾರ ಸಿನಿಮಾಗೆ ಫಿದಾ ಆಗಿಬಿಟ್ಟಿದ್ದಾರೆ.
ಸಿನಿಮಾವನ್ನು ನೋಡಿದ್ದ ಶಿಲ್ಪಾ ಶೆಟ್ಟಿ ಕಾಂತಾರ ಚಿತ್ರಕ್ಕೆ ಪ್ರಶಂಸೆಯ ಸುರಿಮಳೆಗೈದಿದ್ದರು ಹಾಗೂ ರಿಷಬ್ ಶೆಟ್ಟಿಯನ್ನು ಕೊಂಡಾಡಿದ್ದರು. ಇದೀಗ ದಿ ಕಾಶ್ಮೀರ ಫೈಲ್ಸ್ ಎಂಬ ಬೃಹತ್ ಹಿಟ್ ಚಿತ್ರ ನೀಡಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಾಂತಾರ ಚಿತ್ರವನ್ನು ವೀಕ್ಷಿಸಿದ ಕೂಡಲೇ ವಿಡಿಯೋವೊಂದರ ಮೂಲಕ ಚಿತ್ರವನ್ನು ವಿಮರ್ಶಿಸಿದ್ದಾರೆ.
ಕಾಂತಾರ ಚಿತ್ರವನ್ನು ವೀಕ್ಷಿಸಿ ಚಿತ್ರಮಂದಿರದಿಂದ ಮನೆಗೆ ತೆರಳುತ್ತಿದ್ದ ವಿವೇಕ್ ಅಗ್ನಿಹೋತ್ರಿ ಕಾರಿನಲ್ಲಿಯೇ ಕುಳಿತು ಸೆಲ್ಫಿ ವಿಡಿಯೋ ಮಾಡಿದ್ದಾರೆ. ‘ಈಗ ತಾನೇ ಕಾಂತಾರ ಚಿತ್ರವನ್ನು ವೀಕ್ಷಿಸಿ ಹೊರ ಬಂದಿದ್ದೇನೆ. ಇದೊಂದು ಹೊಚ್ಚ ಹೊಸ ಅನುಭವ. ನೀವು ಇಂತಹ ಚಿತ್ರವನ್ನು ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ ಆದರೆ ನಾನು ಮಾತ್ರ ಇಲ್ಲಿಯವರೆಗೂ ಇಂತಹ ಚಿತ್ರವನ್ನು ನೋಡಿಲ್ಲ’ ಎಂದು ಹೇಳಿಕೆ ನೀಡಿದರು.
ಇನ್ನೂ ಮುಂದುವರಿದು ಮಾತನಾಡಿದ ವಿವೇಕ್ ಅಗ್ನಿಹೋತ್ರಿ ರಿಷಬ್ ಶೆಟ್ಟಿಗೆ ಹ್ಯಾಟ್ಸಾಫ್. ರಿಷಬ್ ಶೆಟ್ಟಿ ಅವರೇ ನೀವು ಅತ್ಯದ್ಭುತ ಕೆಲಸ ಮಾಡಿದ್ದೀರಿ, ನಾನು ನಿಮಗೆ ನಾಳೆ ಕಾಲ್ ಮಾಡುತ್ತೇನೆ, ಆದರೆ ನನಗೆ ತಡೆದುಕೊಳ್ಳಲಾಗುತ್ತಿಲ್ಲ ವಿಡಿಯೋ ಮೂಲಕ ಜನರಿಗೆ ಚಿತ್ರದ ಕುರಿತು ಹಂಚಿಕೊಳ್ಳುತ್ತಿದ್ದೇನೆ ಎಂದರು.
ಚಿತ್ರದಲ್ಲಿ ಕಲೆ, ನಮ್ಮ ನೆಲದ ಸೊಗಡನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಅದರಲ್ಲಿಯೂ ಚಿತ್ರದ ಕ್ಲೈಮ್ಯಾಕ್ಸ್ ಅತ್ಯದ್ಭುತ ಎಂದು ವಿವೇಕ್ ಅಗ್ನಿಹೋತ್ರಿ ಕಾಂತಾರ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದರು.
ದೀಪಾವಳಿ ಹಬ್ಬವನ್ನು ಮುಗಿಸಿ ಮೊದಲು ಕಾಂತಾರ ಚಿತ್ರವನ್ನು ವೀಕ್ಷಿಸಿ, ಚಿತ್ರದ ಕಥೆ, ಸಂಗೀತ ನಿರ್ದೇಶನ, ಛಾಯಾಗ್ರಹಣ ಎಲ್ಲವೂ ಅತ್ಯದ್ಭುತ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದರು. ಇಂಥ ಅತ್ಯದ್ಭುತ ಚಿತ್ರವನ್ನು ವೀಕ್ಷಿಸಿ ತುಂಬಾ ದಿನಗಳಾಗಿವೆ, ನಾನು ಕಂಡ ಸಾರ್ವಕಾಲಿಕ ಅತ್ಯುತ್ತಮ ಚಿತ್ರಗಳಲ್ಲಿ ಇದೂ ಸಹ ಒಂದು, ಇಂಥ ಚಿತ್ರವನ್ನು ಮಾಡಿದ ರಿಷಬ್ ಶೆಟ್ಟಿ ನಿಜಕ್ಕೂ ಮಾಸ್ಟರ್ ಪೀಸ್ ಎಂದು ಕೊಂಡಾಡಿದರು.