ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಸೊಮಾಲಿಯಾದ ಕಿಸ್ಮಾಯೊದಲ್ಲಿನ ಹೊಟೆಲ್ ನಲ್ಲಿ ಭಾನುವಾರ ಕಾರ್ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ 9 ಜನರು ಸಾವನ್ನಪ್ಪಿದ್ದಾರೆ ಹಾಗೂ 47 ಮಂದಿ ಗಾಯಗೊಂಡಿದ್ದಾರೆ ಎಂದು ಅಂತರಾಷ್ಟ್ರೀಯ ಸುದ್ದಿ ಮೂಲಗಳು ವರದಿ ಮಾಡಿವೆ. ಈ ಘಟನೆಯ ಹೊಣೆಯನ್ನು ಇಸ್ಲಾಮಿಸ್ಟ್ ಗುಂಪು ಅಲ್-ಶಬಾಬ್ ಹೊತ್ತುಕೊಂಡಿದೆ ಎನ್ನಲಾಗಿದೆ.
ಅಲ್-ಖೈದಾ ಉಗ್ರ ಸಂಘಟನೆಯು ಮೊಗಾದಿಶು, ಹಾಗೂ ಮಧ್ಯ ಸೊಮಾಲಿಯಾವನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಇದು ಇತ್ತೀಚಿನದಾಗಿದೆ.
ಮಧ್ಯಾಹ್ನ 12.45ರ ಸುಮಾರಿಗೆ ಹೊಟೆಲ್ ತವಕಲ್ ಗೆ ಉಗ್ರ ದಾಳಿಕೋರರಿದ್ದ ಕಾರು ಢಿಕ್ಕಿ ಹೊಡೆದನಂತರ ದಾಳಿ ಪ್ರಾರಂಭವಾಗಿದ್ದು ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಕೆಲವು ಗಂಟೆಗಳ ಕಾಲ ಹೋರಾಟ ನಡೆದಿದೆ. ಅಂತೂ ಸಾಯಂಕಾಲ 7 ಗಂಟೆಯ ಸುಮಾರಿಗೆ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಹತ್ತಿರದ ಶಾಲೆಗಳಿಂದ ವಾಪಸ್ಸಾಗುತ್ತಿದ್ದ ವಿದ್ಯಾರ್ಥಿಗಳೂ ಸೇರಿದ್ದಾರೆ ಎನ್ನಲಾಗಿದೆ.