ಹೊಸದಿಗಂತ ವರದಿ ವಿಜಯಪುರ:
ಮುಂಬರುವ 2023 ಕ್ಕೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನ.1 ರಿಂದ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಪಂಚ ರತ್ನ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಬೈ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಯಾತ್ರೆ ನಡೆಯಲಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಶಯಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವುದು ಯಾತ್ರೆಯ ಉದ್ದೇಶವಾಗಿದೆ ಎಂದರು.
ʻಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ಚಿಂತೆ, ಕಾಂಗ್ರೆಸ್ ಗೆ ರಾಹುಲ್ ಗಾಂಧಿ ಚಿಂತೆ, ಜೆಡಿಎಸ್ ಗೆ ಮಾತ್ರ ರಾಜ್ಯದ ಚಿಂತೆ ಇದೆʼ ಎಂದರು. ಮೀಸಲಾತಿ ವಿಚಾರ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಎಸ್ಸಿ- ಎಸ್ಟಿ ಮೀಸಲಾತಿ ಹೆಚ್ಚಳ ಕೇವಲ ಗಿಮಿಕ್. ಮೀಸಲಾತಿ ಬಗ್ಗೆ ಪರಾಮರ್ಶೆ ಆಗಬೇಕು. ಈ ಸರ್ಕಾರಕ್ಕೆ ದಿಕ್ಕಿಲ್ಲ, ದೆಸೆಯಿಲ್ಲ. ಇವರಿಗೆ ಬದ್ದತೆಯಿದ್ದರೆ ಒಂದು ಕಮಿಟಿ ರಚನೆ ಮಾಡಲಿ. ಮೀಸಲಾತಿ ಕೇಳುತ್ತಿರುವವರ ಬಗ್ಗೆ ಸಮೀಕ್ಷೆ ನಡೆಸಬೇಕು ಎಂದರು.
ಕಾಂಗ್ರೆಸ್ಗೆ ಮುಸ್ಲಿಂರ ಬಗ್ಗೆ ಕಾಳಜಿ ಇಲ್ಲ. ರಾಜ್ಯದ 70 ವರ್ಷದ ಇತಿಹಾಸದಲ್ಲಿ ಮುಸ್ಲಿಂರಿಗೆ ರಾಜ್ಯಾಧ್ಯಕ್ಷ ಮಾಡಿದ್ದು ಜೆಡಿಎಸ್ ಮಾತ್ರ. ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸಿದರು. ಅಲ್ಪಸಂಖ್ಯಾತರು ಕಾಂಗ್ರೆಸ್ ಅನ್ನು ನಂಬಬಾರದು. ಅವರದ್ದು ಕೇವಲ ಕಣ್ಣೊರೆಸುವ ತಂತ್ರ. ಭಾರತ ಜೋಡೋಕ್ಕಿಂತ ಕಾಂಗ್ರೆಸ್ ಜೋಡೇ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಜೆಡಿಎಸ್ ಕಳೆದ ಬಾರಿಯೇ ಐದು ಸ್ಥಾನ ಗೆಲ್ಲಬೇಕಿತ್ತು. ಈ ಬಾರಿ ಎಂಟು ಕ್ಷೇತ್ರದಲ್ಲೂ ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ಮತ್ತೆ ಬಸವತತ್ವದ ಸರ್ಕಾರವನ್ನು ರಾಜ್ಯದಲ್ಲಿ ತರುವ ಸಂಕಲ್ಪದೊಂದಿಗೆ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.