T20 World Cup | ಮಳೆಯಿಂದ ಜಿಂಬಾಬ್ವೆ-ದಕ್ಷಿಣ ಆಫ್ರಿಕಾ ಪಂದ್ಯ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ರದ್ದಾಗಿದ್ದು, ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡಿವೆ.

ಜಿಂಬಾಬ್ವೆ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪಂದ್ಯಕ್ಕೆ ಇಲ್ಲಿನ ಬೆಲೆರಿವ್ ಓವಲ್ ಮೈದಾನ ಆತಿಥ್ಯವನ್ನು ವಹಿಸಿತ್ತು. ಈ ಪಂದ್ಯಕ್ಕೆ ಆರಂಭದಿಂದಲೇ ಮಳೆ ಅಡ್ಡಿಪಡಿಸುತ್ತಲೇ ಇದ್ದು, ಅಂತಿಮವಾಗಿ 20 ಓವರ್‌ಗಳ ಇನಿಂಗ್ಸ್‌ ಬದಲಿಗೆ ತಲಾ 9 ಓವರ್‌ಗಳ ಇನಿಂಗ್ಸ್‌ ಆಡಿಸಲು ಅಂಪೈರ್ ತೀರ್ಮಾನಿಸಿದರು.

ಹೀಗಾಗಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ತೀರ್ಮಾನಿಸಿದ ಜಿಂಬಾಬ್ವೆ ತಂಡವು, ಹರಿಣಗಳ ಪಡೆಯ ವೇಗಿಗಳ ದಾಳಿಗೆ ತತ್ತರಿಸಿ ನಿಗದಿತ 9 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕೇವಲ 79 ರನ್ ಗಳಿಸಲಷ್ಟೇ ಶಕ್ತವಾಯಿತು.

ಇನ್ನು ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಕ್ವಿಂಟನ್ ಡಿ ಕಾಕ್ ವಿಸ್ಪೋಟಕ ಆರಂಭವನ್ನು ಒದಗಿಸಿಕೊಟ್ಟರು. ಆದರೆ ಎರಡನೇ ಓವರ್ ಆರಂಭವಾಗುತ್ತಿದ್ದಂತೆಯೇ ಮತ್ತೆ ಮಳೆರಾಯ ಪಂದ್ಯಕ್ಕೆ ಅಡ್ಡಿಪಡಿಸಿದ್ದು, ಹೀಗಾಗಿ 7 ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು 64 ರನ್‌ಗಳ ಗುರಿ ನಿಗದಿ ಪಡಿಸಲಾಯಿತು. ಇನ್ನು ದಕ್ಷಿಣ ಆಫ್ರಿಕಾ ಗೆಲ್ಲಲು ಕೊನೆಯ 4 ಓವರ್‌ಗಳಲ್ಲಿ ಕೇವಲ 13 ರನ್‌ಗಳ ಅಗತ್ಯವಿತ್ತು. ಆಗ ಮತ್ತೆ ಜೋರಾಗಿ ಮಳೆ ಸುರಿದ್ದರಿಂದ ಪಂದ್ಯವನ್ನು ರದ್ದು ಮಾಡಲಾಯಿತು. ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡವು.

ಟೀಂ ಇಂಡಿಯಾ ಸೆಮೀಸ್ ಹಾದಿ ಸಲೀಸು

ಈ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ, ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡದ ಸೆಮಿಫೈನಲ್ ಹಾದಿ ಸುಗಮವಾಗಿದೆ. ಭಾರತ ತಂಡವು ಸೂಪರ್ 12 ಹಂತದಲ್ಲಿ ಎರಡನೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಪಾಕಿಸ್ತಾನ ಹಾಗೂ ನೆದರ್‌ಲೆಂಡ್ಸ್‌ ತಂಡಗಳ ಸ್ಥಾನ ಪಡೆದಿವೆ. ಈಗಾಗಲೇ ಟೀಂ ಇಂಡಿಯಾ ತನ್ನ ಪಾಲಿನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ರೋಚಕ ಗೆಲುವು ಸಾಧಿಸುವ ಮೂಲಕ ಎರಡು ಅಂಕಗಳನ್ನು ತನ್ನದಾಗಿಸಿಗೊಂಡಿದ್ದು, ಇನ್ನುಳಿದ 4 ಪಂದ್ಯಗಳ ಪೈಕಿ ಮೂರರಲ್ಲಿ ಅಂದರೆ ಬಾಂಗ್ಲಾದೇಶ, ಜಿಂಬಾಬ್ವೆ, ನೆದರ್‌ಲೆಂಡ್ಸ್‌ ವಿರುದ್ದ ಗೆಲುವು ಸಾಧಿಸಿದರೆ 8 ಅಂಕಗಳೊಂದಿಗೆ ಸುಲಭವಾಗಿ ಸೆಮಿಫೈನಲ್‌ಗೆ ಲಗ್ಗೆಯಿಡಲಿದೆ. ಆದರೆ ಈ ಮೂರು ಪಂದ್ಯಗಳಿಗೆ ಮಳೆ ಅಡ್ಡಿಪಡಿಸಬಾರದಷ್ಟೇ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!