ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೀನ್ಯಾದ ಅಧಿಕಾರಿಗಳು ಬಾಲಾಜಿ ಟೆಲಿಫಿಲ್ಮ್ಸ್‌ನ ಮಾಜಿ ಮುಖ್ಯ ಕಾರ್ಯಾಚರಣೆ ಅಧಿಕಾರಿ ಜುಲ್ಫಿಕರ್ ಖಾನ್ ಸೇರಿದಂತೆ ಆ ದೇಶದಲ್ಲಿ ನಾಪತ್ತೆಯಾದ ಭಾರತೀಯ ಪ್ರಜೆಗಳ ಬಗ್ಗೆ ತ್ವರಿತ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಆದಷ್ಟು ಬೇಗ ತನಿಖೆಯ ವರದಿಯನ್ನು ಸಲ್ಲಿಸಲಾಗುವುದು ಎಂದು ಕೀನ್ಯಾದ ಪಬ್ಲಿಕ್ ಪ್ರಾಸಿಕ್ಯೂಷನ್ಸ್ ನಿರ್ದೇಶಕ ನೂರ್ದಿನ್ ಎಂ ಹಾಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರ್ಕಾರವು ಕೀನ್ಯಾದೊಂದಿಗೆ ಸಂಪರ್ಕದಲ್ಲಿದೆ ಮತ್ತು ತನಿಖೆಯನ್ನು ತ್ವರಿತಗೊಳಿಸುವಂತೆ ವಿನಂತಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ಹೇಳಿತ್ತು. ಕೀನ್ಯಾದಲ್ಲಿರುವ ಭಾರತೀಯ ಹೈಕಮಿಷನರ್ ನಮ್ಗ್ಯಾ ಖಂಪಾ ಅವರು ಅಧ್ಯಕ್ಷ ವಿಲಿಯಂ ಸಮೋಯಿ ರುಟೊ ಅವರನ್ನು ಭೇಟಿಯಾಗಿ ಭಾರತದ ಕಳವಳವನ್ನು ತಿಳಿಸಲು ಮತ್ತು ತನಿಖೆಯನ್ನು ತ್ವರಿತಗೊಳಿಸುವಂತೆ ವಿನಂತಿಸಿದ್ದಾರೆ ಎಂದು ಅದು ತಿಳಿಸಿತ್ತು
“ಈ ವಿಷಯದಲ್ಲಿ ನಮ್ಮ ಕಳವಳಗಳನ್ನು ತಿಳಿಸಲು ಹೊಸದಿಲ್ಲಿಯಲ್ಲಿರುವ ಕೀನ್ಯಾದ ಹೈಕಮಿಷನರ್ ಅವರನ್ನು ಅಕ್ಟೋಬರ್ 23 ರಂದು ಸಚಿವಾಲಯಕ್ಕೆ ಕರೆಸಲಾಯಿತು” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತ್ತು. ಕೀನ್ಯಾದಲ್ಲಿರುವ ಭಾರತೀಯ ಹೈಕಮಿಷನ್ ಇಬ್ಬರು ಭಾರತೀಯರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಅವರಿಗೆ ಸಹಾಯ ಮಾಡುತ್ತಿದೆ ಎಂದು ತಿಳಿಸಲಾಗಿತ್ತು.
ಪ್ತಸ್ತುತ ಭಾರತದ ಮನವಿಗೆ ಕೀನ್ಯಾ ಸರ್ಕಾರ ಪ್ರತಿಕ್ರಿಯಿಸಿದ್ದು ತ್ವರಿತವಾಗಿ ತನಿಖೆ ನಡೆಸುವುದಾಗಿ ಹೇಳಿದೆ.