ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಕೈದಿಗಳ ಮೋಜು ಮಸ್ತಿಯ ತಾಣವಾಗಿ ಮಾರ್ಪಟ್ಟಿದೆ. ಜೈಲಲ್ಲೇ ರೌಡಿಗಳ ಹುಟ್ಟುಹಬ್ಬ ಆಚರಣೆ, ಗುಂಡು-ತುಂಡಿನ ಪಾರ್ಟಿಯ ಜೊತೆಗೆ ಉಗ್ರರ ಕೈನಲ್ಲೂ ಮೊಬೈಲ್ ಇರುವ ಸಾಕಷ್ಟು ವಿಡಿಯೋಗಳು ಈಗಾಗಲೇ ಹೊರ ಬಂದಿವೆ. ಈ ನಡುವಲ್ಲೇ ಮತ್ತೊಂದು ಕರ್ಮಕಾಂಡದ ವಿಡಿಯೋ ವೈರಲ್ ಆಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮದ್ಯ ತಯಾರಿ ಮಾಡಿದ್ದಾರೆ ಎನ್ನಲಾದ ವಿಡಿಯೋ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ್ಯಪಲ್, ದ್ರಾಕ್ಷಿಮತ್ತು ಪೈನ್ ಆ್ಯಪಲ್‌ಗಳನ್ನು ಬಳಸಿ ಜೈಲಿನಲ್ಲಿ ಕೈದಿಗಳು ವೈನ್ ತಯಾರಿಸಿದ್ದಾರೆ ಎನ್ನಲಾದ ವಿಡಿಯೋ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಇದನ್ನು ಜೆಡಿಎಸ್ ಪೋಸ್ಟ್ ಮಾಡಿದ್ದು, ‘ಪರಪ್ಪನ ಅಗ್ರಹಾರ ಜೈಲಿನಲ್ಲಿ ಮದ್ಯದ ಫ್ಯಾಕ್ಟರಿ ಮಾಡಿಕೊಟ್ಟ ಕಾಂಗ್ರೆಸ್ ಸರ್ಕಾರ’ ಎಂದು ಬರಹ ಬರೆದು, ವಿಡಿಯೋವನ್ನು ಹಂಚಿಕೊಂಡಿದೆ.

