ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಉಪಗ್ರಹ ಉಡಾವಣಾ ವ್ಯವಸ್ಥೆಯಲ್ಲಿ ಭಾರತ ನಾಯಕನಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ಪ್ರಮುಖ ಖಾಸಗಿ ಬಾಹ್ಯಾಕಾಶ ಕಂಪನಿ ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಅನ್ನು ವರ್ಚುವಲ್ ಆಗಿ ಉದ್ಘಾಟಿಸಿ ಮಾತನಾಡಿದ ಮೋದಿ, ಇಂದು ದೇಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಭೂತಪೂರ್ವ ಅವಕಾಶವನ್ನು ಕಾಣುತ್ತಿದೆ.
ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯವು ಮಹತ್ತರವಾದ ಪ್ರಗತಿಯನ್ನು ಸಾಧಿಸುತ್ತಿದೆ. ಸ್ಕೈರೂಟ್‌ನ ಇನ್ಫಿನಿಟಿ ಕ್ಯಾಂಪಸ್ ಹೊಸ ಚಿಂತನೆ, ನಾವೀನ್ಯತೆ ಮತ್ತು ಯುವ ಶಕ್ತಿಯ ಪ್ರತಿಬಿಂಬವಾಗಿದೆ. ನಮ್ಮ ಯುವಕರ ನಾವೀನ್ಯತೆ, ಉದ್ಯಮಶೀಲತೆ ಹೊಸ ಎತ್ತರವನ್ನು ಮುಟ್ಟುತ್ತಿವೆ. ಇಂದಿನ ಕಾರ್ಯಕ್ರಮವು ಭವಿಷ್ಯದಲ್ಲಿ ಭಾರತವು ಜಾಗತಿಕ ಉಪಗ್ರಹ ಉಡಾವಣಾ ಪರಿಸರ ವ್ಯವಸ್ಥೆಯಲ್ಲಿ ನಾಯಕನಾಗಿ ಹೊರಹೊಮ್ಮುತ್ತದೆ ಎಂದು ತೋರಿಸುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಭಾರತವು ಸೀಮಿತ ಸಂಪನ್ಮೂಲಗಳೊಂದಿಗೆ ತನ್ನ ಬಾಹ್ಯಾಕಾಶ ಪ್ರಯಾಣವನ್ನು ಪ್ರಾರಂಭಿಸಿತ್ತು. ಆದರೆ, ಅದರ ಸಂಕಲ್ಪವು ಜಾಗತಿಕ ಬಾಹ್ಯಾಕಾಶ ವಲಯದಲ್ಲಿ ಛಾಪು ಮೂಡಿಸಿದೆ. ದಶಕಗಳಿಂದ ಭಾರತದ ಬಾಹ್ಯಾಕಾಶ ಪ್ರಯಾಣಕ್ಕೆ ಹೊಸ ತಿರುವು ನೀಡಿರುವ ಇಸ್ರೋ ಕಾರ್ಯ ಶ್ಲಾಘನೀಯ ಎಂದು ಮೋದಿ ಮಾತನಾಡಿದ್ದಾರೆ.
ʼಜಾಗತಿಕ ಉಪಗ್ರಹ ಉಡಾವಣಾ ವ್ಯವಸ್ಥೆಯಲ್ಲಿ ಭಾರತ ನಾಯಕನಾಗಿ ಹೊರಹೊಮ್ಮಲಿದೆʼ

