ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಜೆಐ (CJI) ಸೂರ್ಯಕಾಂತ್ ನೇತೃತ್ವದ ಪೀಠವು ಹಲವಾರು ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸುವ ಚುನಾವಣಾ ಆಯೋಗದ ಕ್ರಮದ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಆಧಾರ್ ಕಾರ್ಡ್ ಪೌರತ್ವದ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಸುಪ್ರೀಂ ಕೋರ್ಟ್ ಆಧಾರ್ ಕುರಿತು ಪ್ರಶ್ನೆಯೊಂದನ್ನು ಎತ್ತಿದೆ.
ಭಾರತಕ್ಕೆ ಒಳನುಗ್ಗುವವರ ಬಳಿ ಆಧಾರ್ ಇದ್ದರೆ ಅವರು ಮತ ಚಲಾವಣೆ ಮಾಡಲು ಅರ್ಹರೇ ಎಂದು ಪ್ರಶ್ನೆ ಮಾಡಲಾಗಿದೆ. ಆಧಾರ್, ಸಾಮಾಜಿಕ ಕಲ್ಯಾಣ ಪ್ರಯೋಜನಗಳು ಎಲ್ಲರಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಈ ದಾಖಲೆಯು ಸ್ವಯಂಚಾಲಿತವಾಗಿ ಮತದಾನದ ಹಕ್ಕನ್ನು ನೀಡಬಾರದು. ಆಧಾರ್ ಕಾರ್ಡ್ “ಪೌರತ್ವದ ಸಂಪೂರ್ಣ ಪುರಾವೆಯನ್ನು ನೀಡುವುದಿಲ್ಲ” ಎಂದು ಪೀಠ ಪುನರುಚ್ಚರಿಸಿತು.
ಆಧಾರ್ ಎಂಬುದು ಪ್ರಯೋಜನಗಳನ್ನು ಪಡೆಯಲು ರಚಿಸಲಾದ ಶಾಸನವಾಗಿದೆ. ಒಬ್ಬ ವ್ಯಕ್ತಿಗೆ ಪಡಿತರಕ್ಕಾಗಿ ಆಧಾರ್ ನೀಡಲಾಗಿದೆ ಎಂಬ ಕಾರಣಕ್ಕಾಗಿ, ಅವರನ್ನು ಮತದಾರರನ್ನಾಗಿ ಮಾಡಬೇಕೇ? ಎಂದು ಕೋರ್ಟ್ ಪ್ರಶ್ನಿಸಿತು.
ಈ ಹಿಂದೆ ಬಿಹಾರ ಚುನಾವಣೆಯ ವೇಳೆ ಆಧಾರ್ ಕಾರ್ಡ್‌ನ್ನು ನಿವಾಸದ ಪುರಾವೆಯಾಗಿ ಪ್ರಸ್ತುತಪಡಿಸಬಹುದು ಎಂದು ಸುಪ್ರೀಂ ತೀರ್ಪು ನೀಡಿತ್ತು. ಇದೀಗ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಫಾರ್ಮ್ 6 ಅರ್ಜಿಯೊಂದಿಗೆ ಸಲ್ಲಿಸಲಾದ ದಾಖಲೆಗಳ ನಿಖರತೆಯನ್ನು ನಿರ್ಧರಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂದು ನ್ಯಾಯಾಲಯ ಹೇಳಿದೆ.
ಸದ್ಯ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.

