ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂಬರುವ ದೆಹಲಿ ಭೇಟಿಯ ಕುರಿತು ಹರಿದಾಡುತ್ತಿರುವ ವರದಿಗಳಿಗೆ ತೆರೆ ಎಳೆದಿದ್ದಾರೆ. ಹೈಕಮಾಂಡ್‌ನಿಂದ ತಮ್ಮನ್ನು ದೆಹಲಿಗೆ ಬರುವಂತೆ ಯಾರೂ ಕರೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ತಮ್ಮ ನಾಳಿನ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. “ನಾಳೆ, ಇಂದಿರಾಗಾಂಧಿ ಅವರು ಆರಂಭಿಸಿದ ಮಹತ್ವದ ಅಂಗನವಾಡಿ ಯೋಜನೆಗೆ 50 ವರ್ಷಗಳು ತುಂಬಲಿವೆ. ನಾನು ಈ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿಯೇ ಭಾಗವಹಿಸುತ್ತೇನೆ” ಎಂದು ತಿಳಿಸಿದರು.
ಅಲ್ಲದೆ, “ಇಂದು ನಾನು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಂಬೈಗೆ ಹೋಗುತ್ತೇನೆ. ಇಂದು ಸಂಜೆ ಹೋಗಿ ರಾತ್ರಿಯೇ ಹಿಂದಿರುಗುತ್ತೇನೆ” ಎಂದು ತಮ್ಮ ಇಂದಿನ ಕಾರ್ಯಸೂಚಿಯನ್ನು ವಿವರಿಸಿದರು.
ಶನಿವಾರದಂದು ಡಿಕೆ ಶಿವಕುಮಾರ್ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ಪ್ರಯಾಣಿಸಲಿದ್ದಾರೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಜೋರಾಗಿ ಹರಿದಾಡುತ್ತಿತ್ತು. ಮತ್ತೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೈಕಮಾಂಡ್ ಕರೆಸಿದ್ದು, ಈ ಸಂದರ್ಭದಲ್ಲಿ ಇಬ್ಬರೂ ನಾಯಕರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದೂ ವರದಿಯಾಗಿತ್ತು. ಆದರೆ, ಡಿಕೆ ಶಿವಕುಮಾರ್ ಅವರ ಈ ಹೇಳಿಕೆಯು ದೆಹಲಿ ಭೇಟಿಯ ಕುರಿತ ಊಹಾಪೋಹಗಳಿಗೆ ಸದ್ಯಕ್ಕೆ ತೆರೆ ಎಳೆದಿದೆ.

