ಹೊಸದಿಗಂತ ಡಿಜಿಟಲ್ ಡೆಸ್ಕ್:
20ರ ಹರೆಯದ ಗರ್ಭಿಣಿ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದ್ದು, ಮಹಿಳೆಯ ಕುಟುಂಬದವರು ಆಕೆಯ ಪತಿ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆಯ ಶರೂನ್ ಮತ್ತು ಅರ್ಚನಾ ಪ್ರೀತಿಸಿ ಸುಮಾರು ಆರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಬಳಿಕ ಆತ ಆಕೆಯ ಮೇಲೆ ನಿರಂತರವಾಗಿ ಹಲ್ಲೆ ನಡೆಸುತ್ತಿದ್ದನು. ಮಾತ್ರವಲ್ಲದೆ ಆಕೆ ತನ್ನ ಕುಟುಂಬದವರೊಂದಿಗೆ ಮಾತನಾಡದಂತೆ ಶರೂನ್ ತಡೆಯುತ್ತಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆಯ ಶರೂನ್ ನನ್ನು ಪ್ರೀತಿಸಿ ಮದುವೆಯಾಗಿದ್ದ ಅರ್ಚನಾ ಬುಧವಾರ ಮಧ್ಯಾಹ್ನ ಮನೆಯ ಹಿಂದಿನ ಶೆಡ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಪೋಷಕರು ನೀಡಿರುವ ದೂರಿನ ಪ್ರಕಾರ ಶರೂನ್ ನಿರಂತರವಾಗಿ ಅರ್ಚನಾಳ ಮೇಲೆ ಹಲ್ಲೆ ನಡೆಸುತ್ತಿದ್ದನು. ಆಕೆ ತನ್ನ ಕುಟುಂಬದೊಂದಿಗೆ ಮಾತನಾಡದಂತೆ ತಡೆಯುತ್ತಿದ್ದನು ಎನ್ನಲಾಗಿದೆ.
20 ವರ್ಷದವಳಾದ ಅರ್ಚನಾ ಗರ್ಭಿಣಿಯಾಗಿದ್ದಳು. ಬುಧವಾರ ಮಧ್ಯಾಹ್ನ ಆಕೆಯ ಶವ ಗಂಡನ ಮನೆಯ ಹಿಂದಿನ ಶೆಡ್ ನಲ್ಲಿ ಪತ್ತೆಯಾಗಿದೆ. ಆಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಅರ್ಚನಾ ಅವರ ಕುಟುಂಬ ನೀಡಿರುವ ದೂರಿನ ಹಿನ್ನಲೆಯಲ್ಲಿ ಆಕೆಯ ಪತಿ ವಿರುದ್ಧ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಅರ್ಚನಾಳ ತಂದೆ ಹರಿದಾಸ್, ಶರೂನ್ ಕ್ರೂರ ಮನಸ್ಸನ್ನು ಹೊಂದಿದ್ದಾನೆ. ಒಂದು ದಿನ ಅವನು ಅವಳಿಗೆ ಕಾಲೇಜಿನ ಹೊರಗೆ ಹೊಡೆದಿದ್ದಾನೆ. ಆಗ ನಾನು ದೂರು ದಾಖಲಿಸಿದ್ದೆ. ಅನಂತರ ಅವನು ಅರ್ಚನಾ ನಮ್ಮನ್ನು ಸಂಪರ್ಕಿಸದಂತೆ ನಿರ್ಬಂಧಿಸಿದನು ಎಂದು ಹೇಳಿದ್ದಾರೆ.
ಅರ್ಚನಾಳ ಸಹೋದರಿ ಅನು ಕೂಡ ತನ್ನ ಸಹೋದರಿ ಬಿ.ಟೆಕ್ ಓದುವುದನ್ನು ತಡೆದು ವಿದೇಶಕ್ಕೆ ಹೋಗದಂತೆ ಆತ ತಡೆದಿರುವುದಾಗಿ ಹೇಳಿದ್ದಾನೆ ಎಂದು ಆರೋಪಿಸಿದ್ದಾಳೆ.
ಅರ್ಚನಾಳ ಪೋಷಕರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿರುವ ಪೊಲೀಸರು ಶರೂನ್ ನನ್ನು ವಶಕ್ಕೆ ಪಡೆದಿದ್ದಾರೆ. ಆತ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಿಯಾಗಿರುವುದಾಗಿ ಪೊಲೀಸರು ದೃಢಪಡಿಸಿದ್ದಾರೆ.
ಶರೂನ್ ಮತ್ತು ಆತನ ತಾಯಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಜೊತೆಗೆ ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

