ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್‌ನ ಪವರ್‌ಸ್ಟಾರ್ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಚಿತ್ರಗಳು ಸರಣಿ ಸೋಲು ಕಾಣುತ್ತಿರುವುದು ಅಭಿಮಾನಿಗಳಲ್ಲಿ ಸಹಜವಾಗಿ ಬೇಸರ ಮೂಡಿಸಿದೆ. ರಾಜಕೀಯದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಿನಿಮಾಗಳತ್ತ ಗಮನ ನೀಡಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಸತತವಾಗಿ ಚಿತ್ರಗಳು ಹಿಟ್ ಲಿಸ್ಟ್ ಸೇರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ವರ್ಷ ತೆರೆಕಂಡ ಪವನ್ ಕಲ್ಯಾಣ್ ಅವರ ಬಹು ನಿರೀಕ್ಷಿತ ಚಿತ್ರಗಳಾದ ‘ಹರಿಹರ ವೀರಮಲ್ಲು’ ಮತ್ತು ‘ಓಜಿ’ ಎರಡೂ ನಿರೀಕ್ಷಿಸಿದ ಮಟ್ಟಿಗೆ ಯಶಸ್ಸು ಗಳಿಸಲಿಲ್ಲ. ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದರೂ, ಆ ಸದ್ದು ಹೆಚ್ಚು ದಿನ ಉಳಿಯಲಿಲ್ಲ.
ಇದೀಗ ಟಾಲಿವುಡ್ ಅಂಗಳದಲ್ಲಿ ಮತ್ತೊಂದು ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಪವನ್ ಕಲ್ಯಾಣ್ ಅಭಿನಯದ, ಸದ್ಯ ಅರ್ಧಕ್ಕೆ ನಿಂತಿರುವ ‘ಓಜಿ ಪಾರ್ಟ್-2’ ಸಿನಿಮಾದ ಭವಿಷ್ಯ ಅತಂತ್ರವಾಗಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ‘ಓಜಿ’ ಚಿತ್ರವನ್ನು ನಿರ್ಮಿಸಿದ್ದ ಡಿವಿವಿ ದಾನಯ್ಯ ಅವರು ಪಾರ್ಟ್-2 ನಿರ್ಮಾಣದ ವಿಚಾರದಲ್ಲಿ ಹಿಂಜರಿಕೆ ತೋರುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿವೆ.
ನಿಗದಿಯಂತೆ ಯೋಜನೆಗಳು ನಡೆದಿದ್ದರೆ, ‘ಓಜಿ ಪಾರ್ಟ್-2’ ಸಿನಿಮಾದ ಶೂಟಿಂಗ್ ಸಿದ್ಧತೆಗಳು ಶುರುವಾಗಬೇಕಿತ್ತು. ಆದರೆ, ಯಾವುದೇ ಚಟುವಟಿಕೆಗಳು ಕಾಣದಿರುವುದು ಈ ವದಂತಿಗೆ ಪುಷ್ಟಿ ನೀಡಿದೆ.
ಪವನ್ ಕಲ್ಯಾಣ್ ಅವರು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಕಾರಣ, ಸಿನಿಮಾದ ಶೂಟಿಂಗ್‌ಗಾಗಿ ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಶೂಟಿಂಗ್ ಆರಂಭವಾದರೂ, ಚಿತ್ರೀಕರಣ ಪೂರ್ಣಗೊಳ್ಳಲು ಸಾಕಷ್ಟು ವಿಳಂಬವಾಗಬಹುದು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸದ್ಯಕ್ಕೆ ಚಿತ್ರವನ್ನು ನಿಲ್ಲಿಸುವುದೇ ಉತ್ತಮ ಎಂಬ ನಿರ್ಧಾರಕ್ಕೆ ನಿರ್ಮಾಪಕರು ಬಂದಿದ್ದಾರೆ ಎಂದು ಟಾಲಿವುಡ್ ಮೂಲಗಳು ಹೇಳುತ್ತಿವೆ.
ಪವರ್‌ಸ್ಟಾರ್‌ನ ಅಭಿಮಾನಿ ಬಳಗವು ತಮ್ಮ ನೆಚ್ಚಿನ ನಟ ರಾಜಕೀಯದ ಜವಾಬ್ದಾರಿಗಳ ಜೊತೆ ಜೊತೆಗೆ ಸಿನಿಮಾದತ್ತಲೂ ಗಮನ ಹರಿಸಲಿ ಎಂದು ಆಶಿಸುತ್ತಿದ್ದಾರೆ.

