Wednesday, January 14, 2026
Wednesday, January 14, 2026
spot_img

ಕೌಟಿಲ್ಯನ ಕಣಜ: ಹಣ, ಆಸ್ತಿಗಿಂತ ಮಿಗಿಲಾದ ಈ 3 ಆಧಾರ ಸ್ತಂಭಗಳಿದ್ದರೆ ಸಾಕು, ನೀವೇ ಅತ್ಯಂತ ಸುಖಿ!

ಸಂತೋಷಕ್ಕೆ ಶ್ರೀಮಂತಿಕೆ ಅನಿವಾರ್ಯವೇ? ಹಣ, ಆಸ್ತಿ, ಐಷಾರಾಮಿ ಜೀವನ ಇದ್ದರೆ ಮಾತ್ರ ನೆಮ್ಮದಿಯಿಂದ, ಸಂತೋಷವಾಗಿ ಇರಲು ಸಾಧ್ಯ. ಇದ್ಯಾವುದು ಇಲ್ಲದಿದ್ದರೆ ಜೀವನದಲ್ಲಿ ಸಂತೋಷವೇ ಇಲ್ಲ ಎಂದು ಬಹುತೇಕರು ಭಾವಿಸುತ್ತಾರೆ. ಆದರೆ, ಪ್ರಾಚೀನ ತತ್ವಜ್ಞಾನಿ ಮತ್ತು ಮಹಾನ್ ಅರ್ಥಶಾಸ್ತ್ರಜ್ಞರಾದ ಆಚಾರ್ಯ ಚಾಣಕ್ಯರ ಪ್ರಕಾರ, ಈ ಮೂರು ಸಂಗತಿಗಳನ್ನು ತಮ್ಮ ಜೀವನದಲ್ಲಿ ಹೊಂದಿರುವ ವ್ಯಕ್ತಿಗಳೇ ಈ ಭೂಮಿಯ ಮೇಲಿನ ನಿಜವಾದ ಅದೃಷ್ಟವಂತರು ಮತ್ತು ಅವರು ಭೂಮಿಯ ಮೇಲೆಯೇ ಸ್ವರ್ಗದಂತಹ ಸುಖವನ್ನು ಅನುಭವಿಸುತ್ತಾರೆ.

ಅಷ್ಟಕ್ಕೂ ಆ ಮೂರು ಸಂಪತ್ತುಗಳು ಯಾವುವು? ಆ ಅದೃಷ್ಟವಂತ ವ್ಯಕ್ತಿಗಳು ಯಾರೆಂಬುದನ್ನು ತಿಳಿಯೋಣ ಬನ್ನಿ.

  1. ಸದ್ಗುಣಶೀಲ ಮತ್ತು ಗೌರವಾನ್ವಿತ ಮಕ್ಕಳು
    ಚಾಣಕ್ಯ ನೀತಿಯ ಪ್ರಕಾರ, ಸದ್ಗುಣಶೀಲ, ಪಾಲಕರನ್ನು ಗೌರವಿಸುವ ಮತ್ತು ಅವರ ಮಾತನ್ನು ನಡೆಸುವ ಮಕ್ಕಳನ್ನು ಹೊಂದಿರುವ ಪೋಷಕರು ಅತ್ಯಂತ ಅದೃಷ್ಟವಂತರು.

ಇಂತಹ ಮಕ್ಕಳು ತಮ್ಮ ಹೆತ್ತವರನ್ನು ಸಂತೋಷದಿಂದ ನೋಡಿಕೊಳ್ಳುತ್ತಾರೆ. ವೃದ್ಧಾಪ್ಯದಲ್ಲಿ ಅವರಿಗೆ ಆಸರೆಯಾಗಿ ನಿಲ್ಲುತ್ತಾರೆ ಮತ್ತು ಅವರ ಮೇಲೆ ಅಪಾರವಾದ ಪ್ರೀತಿ ಹಾಗೂ ಗೌರವವನ್ನು ಹೊಂದಿರುತ್ತಾರೆ. ಈ ಪೋಷಕರು ತಮ್ಮ ಜೀವನದಲ್ಲಿ ಎಂದಿಗೂ ನೋವು ಅಥವಾ ದುಃಖದಲ್ಲಿ ಕೊರಗುವುದಿಲ್ಲ, ಬದಲಿಗೆ ಭೂಮಿಯ ಮೇಲೆಯೇ ಸ್ವರ್ಗದ ಸಂತೋಷವನ್ನು ಅನುಭವಿಸುತ್ತಾರೆ ಎನ್ನುತ್ತಾರೆ ಚಾಣಕ್ಯ. ಇಂತಹ ಮಕ್ಕಳೇ ನಿಜವಾದ ಸಂಪತ್ತು.

  1. ಪ್ರೀತಿಯ, ಬೆಂಬಲಿಸುವ ಸಹಧರ್ಮಿಣಿ
    ಚಾಣಕ್ಯರು ಹೇಳುವಂತೆ, ಹೆಂಡತಿ ಕೇವಲ ಜೀವನ ಸಂಗಾತಿಯಲ್ಲ, ಆಕೆ ಮನೆಯಲ್ಲಿ ಶಾಂತಿ, ಸಮೃದ್ಧಿ ಮತ್ತು ನೆಮ್ಮದಿಯ ಅಡಿಪಾಯ.

ಯಾವ ವ್ಯಕ್ತಿ ತನ್ನ ಗಂಡನನ್ನು ಆಳವಾಗಿ ಅರ್ಥಮಾಡಿಕೊಳ್ಳುವ, ಸದಾ ಬೆಂಬಲವಾಗಿ ನಿಲ್ಲುವ, ಆತನಿಗೆ ಗೌರವವನ್ನು ನೀಡುವ ಮತ್ತು ಗಂಡನ ಕಷ್ಟ-ಸುಖ ಎರಡರಲ್ಲೂ ಹೆಜ್ಜೆ ಹೆಜ್ಜೆಗೂ ಜೊತೆಯಾಗಿ ನಿಲ್ಲುವ ಪತ್ನಿಯನ್ನು ಪಡೆಯುತ್ತಾನೋ, ಆತನ ಜೀವನವು ಸದಾ ಸಂತೋಷದಿಂದ ಮತ್ತು ಆನಂದದಿಂದ ಕೂಡಿರುತ್ತದೆ. ಇಂತಹ ಪತ್ನಿಯು ದಾಂಪತ್ಯ ಜೀವನಕ್ಕೆ ಬಲವಾದ ಆಧಾರ ಸ್ತಂಭವಾಗಿದ್ದು, ಆಕೆಯ ಉಪಸ್ಥಿತಿಯೇ ಸ್ವರ್ಗಕ್ಕೆ ಸಮಾನ.

  1. ಸಂತೃಪ್ತ ಮನಸ್ಸು ಮತ್ತು ತೃಪ್ತಿಯ ಜೀವನ
    ನಿಜವಾದ ಸಂತೋಷವು ಹೊರಗಿನ ಸಂಪತ್ತಿನಲ್ಲಿಲ್ಲ, ಅದು ನಿಮ್ಮ ಒಳಗಿನ ಮನಸ್ಸಿನ ತೃಪ್ತಿಯಲ್ಲಿ ಅಡಗಿದೆ.

ಯಾವ ವ್ಯಕ್ತಿ ಯಾವುದಕ್ಕೂ ಅತಿಯಾಗಿ ದುರಾಸೆ ಪಡದೆ, ಇತರರ ಏಳಿಗೆಗೆ ಅಸೂಯೆ ಪಡದೆ, ತನ್ನಲ್ಲಿ ಏನಿದೆ ಅದರಲ್ಲಿಯೇ ಖುಷಿ ಕಾಣುತ್ತಾ ಸಂತೃಪ್ತ ಜೀವನ ನಡೆಸುತ್ತಾನೋ, ಆತನು ಯಾವಾಗಲೂ ಸಂತೋಷದಿಂದ ಇರುತ್ತಾನೆ. ಅತೃಪ್ತಿಯ ದುಃಖ ಆತನನ್ನು ಎಂದಿಗೂ ಕಾಡುವುದಿಲ್ಲ. ಆದ್ದರಿಂದ, ಜೀವನದಲ್ಲಿ ಲಭ್ಯವಿರುವುದರಲ್ಲೇ ತೃಪ್ತಿ ಪಡಬೇಕು. ಸಂತೋಷದ ಜೀವನಕ್ಕೆ ದುರಾಸೆ ಮತ್ತು ಅಸೂಯೆಯನ್ನು ತ್ಯಜಿಸಬೇಕು ಎನ್ನುತ್ತಾರೆ ಚಾಣಕ್ಯ.

Most Read

error: Content is protected !!