ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಖ್ಯಾತ ತಾರಾ ಜೋಡಿಗಳಾದ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರ ದಾಂಪತ್ಯವು 1980 ರಲ್ಲಿ ಆರಂಭವಾಯಿತು. ಸುದೀರ್ಘ ವರ್ಷಗಳ ಈ ಬಾಂಧವ್ಯವನ್ನು ಇದೀಗ ಹೇಮಾ ಮಾಲಿನಿ ಅವರು ಅತ್ಯಂತ ಭಾವನಾತ್ಮಕವಾಗಿ ಮೆಲುಕು ಹಾಕಿದ್ದಾರೆ. ಅಪರೂಪದ ಹಾಗೂ ಅನ್ಯೋನ್ಯ ಕ್ಷಣಗಳ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅವರು ನೆನಪಿನ ಪುಟ ತೆರೆದಿದ್ದಾರೆ.
ಪತಿಯನ್ನು ಕೊಂಡಾಡಿದ ಹೇಮಾ ಮಾಲಿನಿ:
ಹೇಮಾ ಮಾಲಿನಿ ಅವರು ತಮ್ಮ ಪತಿ ಧರ್ಮೇಂದ್ರ ಅವರ ವ್ಯಕ್ತಿತ್ವವನ್ನು ಮನಸಾರೆ ಹೊಗಳಿದ್ದಾರೆ. “ಉತ್ತಮ ಪತಿ, ಸ್ನೇಹಿತ, ಮಾರ್ಗದರ್ಶಿ, ತತ್ವಜ್ಞಾನಿ, ಕವಿ.. ಹೀಗೆ ನನ್ನ ಪಾಲಿಗೆ ಧರ್ಮೇಂದ್ರ ಅವರು ಎಲ್ಲವೂ ಆಗಿದ್ದರು” ಎಂದು ಅವರು ಪ್ರೀತಿಯಿಂದ ಹೇಳಿಕೊಂಡಿದ್ದಾರೆ.
ಸುಖ-ದುಃಖದ ಸಮಯದಲ್ಲೂ ಧರ್ಮೇಂದ್ರ ಅವರು ತಮ್ಮ ಜೊತೆಗೆ ಗಟ್ಟಿಯಾಗಿ ನಿಂತಿದ್ದನ್ನು ಸ್ಮರಿಸಿರುವ ಹೇಮಾ, “ಸ್ನೇಹಭಾವದಿಂದ ನಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಅವರು ಆಪ್ತರಾಗಿದ್ದರು” ಎಂದು ತಿಳಿಸಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಧರ್ಮೇಂದ್ರ ಅವರು ಗಳಿಸಿದ್ದ ಅಪಾರ ಖ್ಯಾತಿ, ಜನಪ್ರಿಯತೆ ಮತ್ತು ಸೂಪರ್ ಹಿಟ್ ಸಿನಿಮಾಗಳ ಸಾಧನೆಯ ಕ್ಷಣಗಳನ್ನೂ ಹೇಮಾ ಮಾಲಿನಿ ಅವರು ನೆನಪಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಧರ್ಮೇಂದ್ರ ಅವರ ಅಗಲಿಕೆಯಿಂದ ನನಗೆ ಆದ ನಷ್ಟವನ್ನು ವಿವರಿಸಲು ಸಾಧ್ಯವಿಲ್ಲ” ಎಂದು ಹೇಳುವ ಮೂಲಕ ತಮ್ಮ ಆಳವಾದ ದುಃಖವನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈಗಾಗಲೇ ಧರ್ಮೇಂದ್ರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

