Friday, November 28, 2025

ಕಸದ ರಾಶಿಗೆ ಬೆಂಕಿ ಹಚ್ತಿದ್ದೀರಾ? ಕ್ರಿಮಿನಲ್‌ ಕೇಸ್‌ ದಾಖಲಾಗತ್ತೆ ಹುಷಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಗಷ್ಟೇ ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಗಮದ ಅಧಿಕಾರಿಗಳು ರಸ್ತೆಯಲ್ಲಿ ಕಸ ಸುರಿಯುತ್ತಿದ್ದವರ ಮನೆ ಬಾಗಿಲಿಗೆ ಹೋಗಿ ಕಸ ಸುರಿದು ದಂಡ ವಸೂಲಿ ಮಾಡಲು ಶುರು ಮಾಡಿದ್ದರು.

ಇದೀಗ ಎಫ್ಐಆರ್ ಫೈಲ್ ಮಾಡಿ ಜೈಲಿಗೆ ಕಳಿಸುವ ಎಚ್ಚರಿಕೆ ನೀಡುತ್ತಿದ್ದಾರೆ. ಮತ್ತೊಂದೆಡೆ, ನಗರದಲ್ಲಿ ಎಲ್ಲೆಂದರಲ್ಲಿ ಕಸ ಸುರಿದು ಬೆಂಕಿ ಹಾಕಲಾಗುತ್ತಿದೆ. ಇದರಿಂದ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಈಗಾಗಲೇ ಕಸ ವಿಂಗಡಿಸಿ ಕೊಡಬೇಕು ಎಂಬ ನಿಯಮ ಜಾರಿಯಲ್ಲಿದೆ. ಆದರೂ ಕೂಡ ಜನ ಕಸ ಸುರಿದು ಬೆಂಕಿ ಇಡುತ್ತಿದ್ದಾರೆ.

ಇದನ್ನು ತಡೆಗಟ್ಟಲು BSWML ಕಠಿಣ ಕ್ರಮಕ್ಕೆ ಮುಂದಾಗಿದ್ದು, ಒಂದು ವೇಳೆ ಕಸ ಸುರಿದು ಬೆಂಕಿ ಹಾಕಿದರೆ ಮೊದಲು ದಂಡ ಪ್ರಯೋಗ ಮಾಡಲಿದೆ. ನಂತರ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗಟ್ಟಲಿದೆ.

ಮೊದಲ ಬಾರಿ ಕಸಕ್ಕೆ ಬೆಂಕಿಯಿಟ್ಟರೆ 10 ಸಾವಿರ ರೂ. ದಂಡ. ಎರಡನೇ ಬಾರಿ 20 ಸಾವಿರ ರೂಪಾಯಿ ದಂಡ. ನಂತರ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಇದಕ್ಕೂ ಕ್ಯಾರೇ ಎನ್ನದಿದ್ದರೆ ಎಫ್ಐಆರ್ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು BSWML ಸಿಇಒ ಕರಿಗೌಡ ಮಾಹಿತಿ ನೀಡಿದ್ದಾರೆ.

ಕಸ ಸುಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಘನತ್ಯಾಜ್ಯ ಘಟಕದ ಹೆಲ್ತ್‌ ಇನ್ಸ್​ಪೆಕ್ಟರ್​​ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲೆಂದರಲ್ಲಿ ಕಸ ಸುರಿದು ಬೆಂಕಿ ಹಚ್ಚಿದ ವಿಡಿಯೋ ಮಾಡಿ ಕ್ರಿಮಿನಲ್ ಮೊಕದ್ದಮೆ ಹೂಡಿ, ಪುರಾವೆಗಳ ಅಧಾರದ ಮೇಲೆ ಪರಿಸರ ಸಂರಕ್ಷಣಾ ಕಾಯ್ದೆ ಅಡಿ ಕೇಸ್ ದಾಖಲಿಸಿ. ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ 1981 ಸೆಕ್ಷನ್ 5ರ ಅಡಿ ಕೇಸ್ ದಾಖಲಿಸಿ ಎಂದು ಸೂಚನೆ ನೀಡಲಾಗಿದೆ.

error: Content is protected !!