October 19, 2026
Monday, October 19, 2026
spot_img

HONEY TRAP | ಸೋಶಿಯಲ್‌ ಮೀಡಿಯಾ ಮೂಲಕ ಶ್ರೀಮಂತ ಪುರುಷರನ್ನು ಖೆಡ್ಡಾಗೆ ಬೀಳಿಸುತ್ತಿದ್ದ ಮಹಿಳೆ ಅರೆಸ್ಟ್‌

ಹೊಸದಿಗಂತ ವರದಿ ಬೆಳಗಾವಿ :

ದೊಡ್ಡ ಶ್ರೀಮಂತ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿಕೊಂಡು ಹನಿ ಟ್ರ್ಯಾಪ್ ಮಾಡುತ್ತಿದ್ದ ಮಹಿಳೆಯನ್ನು ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದ ದೀಪಾ ಅವಟಗಿ (33) ಹನಿ ಟ್ರ್ಯಾಪ್ ಆರೋಪಿ. ಈಕೆ ಇದೀಗ ಪೊಲೀಸರ ಅತಿಥಿಯಾಗಿದ್ದು, ಹನಿ ಟ್ರ್ಯಾಪ್ ಗೆ ಸಾಥ್ ಕೊಡುತ್ತಿದ್ದ, ಆಕೆಯ ಸ್ನೇಹಿತ ಶಿವಾನಂದ ಮಠಪತಿ ಪರಾರಿಯಾಗಿದ್ದಾನೆ.

ಶಿವಾನಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿವಾಸಿಯಾಗಿದ್ದು, ಶ್ರೀಮಂತ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ದೀಪಾಗೆ ನೀಡುತ್ತಿದ್ದ ಎಂದು ಮಾಹಿತಿ‌ ತಿಳಿದು ಬಂದಿದೆ.

ಆರೋಪಿ ದೀಪಾ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಮೂಲಕ ಶ್ರೀಮಂತ ವ್ಯಕ್ತಿಗಳೊಂದಿಗೆ ಪರಿಚಯ ಮಾಡಿಕೊಂಡು ಅವರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ದೊಡ್ಡ ವ್ಯಕ್ತಿಗಳು ಪರಿಚಯ ಆದ ಬಳಿಕ ಅಶ್ಲೀಲ ಚಾಟ್ ನಡೆಸಿ, ಅವರನ್ನು ಬೆಳಗಾವಿ ನಗರದ ಲಾಡ್ಜ್‌ನಲ್ಲಿ ಭೇಟಿ ನೀಡಲು ಆಹ್ವಾನಿಸುತ್ತಿದ್ದಳು. ಲಾಡ್ಜ್‌ಗೆ ಬಂದ ವ್ಯಕ್ತಿಗೆ ಸ್ನಾನ ಮಾಡಿ ಬರಲು ಹೇಳಿ, ಆತ ಬಾತ್‌ರೂಮ್‌ಗೆ ಹೋದ ಕೂಡಲೇ ಹೊರಗಿನಿಂದ ಬಾಗಿಲು ಹಾಕಿ ಲಾಕ್ ಮಾಡುತ್ತಿದ್ದಳು.

ಬಳಿಕ ಆತನ ಬಳಿ ಇದ್ದ ಮೊಬೈಲ್, ಹಣ ಹಾಗೂ ಕಾರಿನ ಚಾವಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದಳು. ಈ ರೀತಿಯಾಗಿ ಲಾಡ್ಜ್‌ಗೆ ಬಂದು ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಹನಿ ಟ್ರ್ಯಾಪ್ ಗೆ ಕೊಳಗಾದ ವ್ಯಕ್ತಿ ಒಬ್ಬರ ದೂರಿನ ಮೇರೆಗೆ, ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಇನ್ಸ್ಪೆಕ್ಟರ್ ಪರಶುರಾಮ ಪೂಜೇರಿ ನೇತೃತ್ವದ ತಂಡವು ಹನಿ ಟ್ರ್ಯಾಪ್ ಆರೋಪಿ‌ ದೀಪಾಳನ್ನು ಬಂಧಿಸುವಲ್ಲ ಯಶಸ್ವಿಯಾಗಿದ್ದ ಬಳಿಕ, ಆರೋಪಿಯನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ.

ಆರೋಪಿಯಿಂದ ಒಟ್ಟು 32 ಲಕ್ಷ 86 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.  ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read