ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ಬಹುತೇಕ ಎಲ್ಲರಿಗೂ ಎದುರಾಗುತ್ತಿರುವ ಸಮಸ್ಯೆ. ವ್ಯಾಯಾಮದ ಜೊತೆಗೆ ಸರಿಯಾದ ಆಹಾರ ಪದ್ಧತಿ ಅನುಸರಿಸಿದರೆ ಮಾತ್ರ ತೂಕ ಇಳಿಕೆ ಸಾಧ್ಯ. ಅದರಲ್ಲೂ ದಿನನಿತ್ಯದ ಆಹಾರದಲ್ಲೇ ಬದಲಾವಣೆ ಮಾಡಿದರೆ ದೇಹಕ್ಕೆ ಒತ್ತಡವಾಗದೆ ಸಹಜವಾಗಿ ತೂಕ ಕಡಿಮೆಯಾಗುತ್ತದೆ. ಅಂಥ ಸಂದರ್ಭದಲ್ಲಿ ಚಪಾತಿಗೆ ಬದಲಾಗಿ ರಾಗಿ ಮತ್ತು ಜೋಳದ ರೊಟ್ಟಿಗಳು ಹೆಚ್ಚು ಉಪಯುಕ್ತವೆಂಬ ಮಾತು ಕೇಳಿಬರುತ್ತಿದೆ. ಆದರೆ ಈ ಎರಡರಲ್ಲಿ ತೂಕ ಇಳಿಕೆಗೆ ಯಾವುದು ಹೆಚ್ಚು ಪರಿಣಾಮಕಾರಿ ಎಂಬ ಗೊಂದಲ ಬಹುತೇಕ ಜನರಲ್ಲಿ ಇದೆ.
ರಾಗಿ ರೊಟ್ಟಿಯ ಲಾಭಗಳು:
ರಾಗಿಯಲ್ಲಿ ಕ್ಯಾಲ್ಸಿಯಂ ಅತ್ಯಧಿಕವಾಗಿದ್ದು ಎಲುಬುಗಳ ಬಲಕ್ಕೆ ತುಂಬಾ ಸಹಕಾರಿ. ಇದರಲ್ಲಿ ಇರುವ ನಾರಿನ ಅಂಶ ಜೀರ್ಣಕ್ರಿಯೆಯನ್ನು ಸುಧಾರಿಸಿ ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ಕಬ್ಬಿಣಾಂಶ ಸಮೃದ್ಧವಾಗಿರುವುದರಿಂದ ರಕ್ತಹೀನತೆಯ ಸಮಸ್ಯೆಗೂ ಉಪಯುಕ್ತ. ದೀರ್ಘಕಾಲೀನ ಆರೋಗ್ಯ ದೃಷ್ಟಿಯಿಂದ ರಾಗಿ ಅತ್ಯುತ್ತಮ ಧಾನ್ಯ.
ಜೋಳದ ರೊಟ್ಟಿಯ ಲಾಭಗಳು:
ಜೋಳದಲ್ಲಿ ಪ್ರೋಟೀನ್, ನಾರು, ಕಬ್ಬಿಣ ಮತ್ತು ಶರೀರಕ್ಕೆ ಬೇಕಾದ ಅಂಶಗಳು ಸಾಕಷ್ಟು ಇವೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಶಕ್ತಿ ಇದಕ್ಕಿದೆ. ಹೆಚ್ಚು ಹೊತ್ತು ಹೊಟ್ಟೆ ತುಂಬಿದಂತೆ ಭಾಸವಾಗುವುದರಿಂದ ಅತಿಯಾಗಿ ತಿನ್ನುವ ಅಭ್ಯಾಸ ಕಡಿಮೆಯಾಗುತ್ತದೆ. ಜೀರ್ಣಕ್ರಿಯೆಗೆ ಹಗುರವಾಗಿರುವುದರಿಂದ ತೂಕ ಇಳಿಕೆಗೆ ಇದು ಬಹಳ ಅನುಕೂಲಕರ.
ತೂಕ ಇಳಿಕೆಗೆ ಯಾವುದು ಉತ್ತಮ?:
ತೂಕ ಕಡಿಮೆ ಮಾಡುವ ದೃಷ್ಟಿಯಿಂದ ನೋಡಿದರೆ ಜೋಳದ ರೊಟ್ಟಿ ಸ್ವಲ್ಪ ಹೆಚ್ಚು ಪ್ರಯೋಜನಕಾರಿ. ಆದರೆ ದೇಹಕ್ಕೆ ದೀರ್ಘಕಾಲದ ಪೌಷ್ಟಿಕ ಲಾಭಗಳಿಗಾಗಿ ರಾಗಿ ರೊಟ್ಟಿಯನ್ನೂ ಕೈಬಿಡಬಾರದು. ಎರಡನ್ನೂ ಸೂಕ್ತ ಪ್ರಮಾಣದಲ್ಲಿ ಆಹಾರದಲ್ಲಿ ಸೇರಿಸಿಕೊಂಡರೆ ಸಮತೋಲಿತ ಪೋಷಣೆಯೊಂದಿಗೆ ಆರೋಗ್ಯಕರ ತೂಕ ಇಳಿಕೆ ಸಾಧ್ಯ.

