ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಹುದ್ದೆಗೆ ನಡೆಯುತ್ತಿರುವ ‘ಕುರ್ಚಿ ಕಿತ್ತಾಟ’ ಈಗ ತೀವ್ರ ಜಾತಿ ರಾಜಕೀಯದ ಸ್ವರೂಪ ಪಡೆದುಕೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಒಕ್ಕಲಿಗ ಸಮುದಾಯದ ಮುಖಂಡರು ಬ್ಯಾಟಿಂಗ್ ಮಾಡಿದ ಬೆನ್ನಲ್ಲೇ, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಬೃಹತ್ ಪ್ರಮಾಣದಲ್ಲಿ ಕುರುಬ ಸಮಾಜವು ಅಖಾಡಕ್ಕಿಳಿದಿದೆ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧವೇ ಮತ ಹಾಕುವುದಾಗಿ ಸಮುದಾಯವು ಎಚ್ಚರಿಕೆ ನೀಡಿದೆ.
ಈ ವಿಚಾರವಾಗಿ ಇಂದು ಬೆಂಗಳೂರಿನ ಕರ್ನಾಟಕ ಪ್ರದೇಶ ಕುರುಬ ಸಮಾಜದ ಕಛೇರಿಯಲ್ಲಿ ಸಮುದಾಯದ ಪ್ರಮುಖ ಶ್ರೀಗಳು ಮತ್ತು ಮುಖಂಡರು ಮಹತ್ವದ ಸಭೆ ನಡೆಸಿದರು. ಸಿಎಂ ಸ್ಥಾನ ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಿ, ಸಮುದಾಯವು ಒಕ್ಕೊರಲಿನಿಂದ ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿದೆ.
ಸಭೆಯ ಬಳಿಕ ಮಾತನಾಡಿದ ತಿಂಥಣಿ ಮಠದ ಸಿದ್ದರಾಮನಂದಪೂರಿ ಸ್ವಾಮೀಜಿ, ರಾಜ್ಯದ ಎಲ್ಲಾ ಕುರುಬ ಸಂಘದ ನಿರ್ದೇಶಕರು ಮತ್ತು ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಇತ್ತೀಚಿಗೆ ರಾಜಕೀಯದ ಸುತ್ತ ಗೊಂದಲಗಳು ಸೃಷ್ಟಿಯಾಗಿದ್ದು, ಅನೇಕ ಸಮುದಾಯಗಳಂತೆ ಕುರುಬ ಸಮುದಾಯವೂ ಗೊಂದಲಕ್ಕೊಳಗಾಗಿದೆ ಎಂದು ತಿಳಿಸಿದರು.
“ಕಾಂಗ್ರೆಸ್ ಹೈಕಮಾಂಡ್ ಈ ರೀತಿ ಪರಿಸ್ಥಿತಿ ಬರುವಂತೆ ಮಾಡಿಕೊಳ್ಳಬಾರದು. ಮಠಾಧೀಶರು ಒಬ್ಬ ವ್ಯಕ್ತಿಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿ, ದೆಹಲಿಗೆ ಹೋಗಿ ಲಾಬಿ ಮಾಡುವಂತಹ ಪರಿಸ್ಥಿತಿ ಬರಬಾರದಾಗಿತ್ತು. ಘನತೆ ಹೊಂದಿರುವ ಸಿದ್ದರಾಮಯ್ಯ ಅವರ ಬಗ್ಗೆ ಹೈಕಮಾಂಡ್ ಸರಿಯಾದ ತೀರ್ಮಾನ ಕೈಗೊಳ್ಳಬೇಕು. ಅವರ ಗೌರವಕ್ಕೆ ಏನಾದರೂ ಚ್ಯುತಿ ಬಂದರೆ, ಅದು ಕೇವಲ ಕರ್ನಾಟಕಕ್ಕಷ್ಟೇ ಅಲ್ಲದೆ, ಇಡೀ ದೇಶದ ರಾಜಕೀಯದ ಮೇಲೂ ಪರಿಣಾಮ ಬೀರಲಿದೆ” ಎಂದು ಸ್ವಾಮೀಜಿಗಳು ಕಟು ಎಚ್ಚರಿಕೆ ನೀಡಿದರು.
ಇದಲ್ಲದೇ, ಸಿಎಂ ಸಿದ್ದರಾಮಯ್ಯ ಅವರನ್ನು ಕೇವಲ ಕುರುಬ ಸಮುದಾಯದ ನಾಯಕನಾಗಿ ನೋಡಬಾರದು. ಅವರು ಅಹಿಂದ ಸಮುದಾಯಗಳ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ಈ ಸ್ಥಾನಮಾನಕ್ಕೆ ಚ್ಯುತಿ ಬಾರದಂತೆ ಹೈಕಮಾಂಡ್ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
“ಪಕ್ಷದ ವಿಚಾರವಾಗಿ ಹೈಕಮಾಂಡ್ ಸರಿಯಾದ ತೀರ್ಮಾನ ತೆಗೆದುಕೊಳ್ಳದೇ ಇರುವುದರಿಂದ ಈ ರೀತಿ ಗೊಂದಲಗಳು ಉಂಟಾಗುತ್ತಿವೆ. ಇದು ವ್ಯಕ್ತಿ ಮತ್ತು ಪಕ್ಷ ಎರಡಕ್ಕೂ ತೊಂದರೆಯುಂಟು ಮಾಡುತ್ತದೆ. ಯಾವುದೇ ಸಮುದಾಯದ ಸ್ವಾಮೀಜಿ ಇಂತಹ ರಾಜಕೀಯ ವಿಚಾರವಾಗಿ ನಿಲುವು ತೆಗೆದುಕೊಳ್ಳಬಾರದು, ಇದು ತಪ್ಪು. ಆದರೆ, ನಾವು ಸಿದ್ದರಾಮಯ್ಯನವರಿಗೆ ಕುರುಬ ಸಮುದಾಯ ಎಂಬ ಕಾರಣಕ್ಕೆ ಬೆಂಬಲಿಸುತ್ತಿಲ್ಲ. ಬದಲಿಗೆ, ಅವರು ಬಡವರು ಹಾಗೂ ದೀನದಲಿತರ ಪರವಾಗಿ ಇದ್ದಾರೆ ಎಂಬ ಕಾರಣಕ್ಕೆ ಬೆಂಬಲ ನೀಡುತ್ತಿದ್ದೇವೆ” ಎಂದು ಸ್ವಾಮೀಜಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

