ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆಗೆ ಗ್ರಾಸವಾಗಿರುವ ‘ಪವರ್ ಶೇರಿಂಗ್’ ಮತ್ತು ನಾಯಕತ್ವ ಬದಲಾವಣೆ ವಿಚಾರದ ಕುರಿತು ಹೈಕಮಾಂಡ್‌ನ ನಿರ್ಧಾರವೇ ಅಂತಿಮ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಪಷ್ಟಪಡಿಸಿದ್ದಾರೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ದೆಹಲಿ ನಾಯಕತ್ವಕ್ಕೆ ರಾಜ್ಯದ ಪರಿಸ್ಥಿತಿಯ ಕುರಿತು ಸಮಯಪ್ರಜ್ಞೆ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆಯವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಹೈಕಮಾಂಡ್ ಜೊತೆ ನಡೆಸಿದ್ದಾರೆ ಎನ್ನಲಾದ ಸಭೆಯ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು.
“ಖರ್ಗೆಯವರು ಏನು ಹೇಳಿದ್ದಾರೆ? ಅಗತ್ಯ ಇದ್ದಾಗ ಕರೆದು ಮಾತನಾಡುತ್ತೇವೆ ಎಂದಿದ್ದಾರೆ. ನಾಯಕತ್ವ ವಿಚಾರವಾಗಿ ಹೈಕಮಾಂಡ್ ಮೀಟಿಂಗ್ ಬಗ್ಗೆ ಸದ್ಯಕ್ಕೆ ಅಧಿಕೃತ ಮಾಹಿತಿ ಇಲ್ಲ. ಖರ್ಗೆ ಸಾಹೇಬ್ರು ಹೇಳಿದ್ರೆ ಸಭೆ ಆಗುತ್ತೆ. ಅಧಿಕೃತ ಆಹ್ವಾನ ಯಾರೂ ನೀಡಿಲ್ಲ,” ಎಂದು ಪ್ರಿಯಾಂಕ್ ತಿಳಿಸಿದರು.
ಹೈಕಮಾಂಡ್‌ನ ತೀರ್ಮಾನವೇ ಅಂತಿಮ
ರಾಜ್ಯ ಕಾಂಗ್ರೆಸ್‌ನ ನಾಯಕತ್ವ ಮತ್ತು ಆಂತರಿಕ ಸಮಸ್ಯೆಗಳ ಕುರಿತು ಪ್ರಿಯಾಂಕ್ ಖರ್ಗೆ ಅವರು, ಎಐಸಿಸಿ ಅಧ್ಯಕ್ಷರು ಕರೆದರೆ ಎಲ್ಲರೂ ಹೋಗ್ತಾರೆ. ಹೈಕಮಾಂಡ್ ನಾಯಕರಿಗೆ ಸೂಕ್ತ ಸಮಯದ ಅರಿವು ಇದೆ. “130 ವರ್ಷಗಳಿಂದ ಇದೆ ತರಹ ನಡೆದುಕೊಂಡು ಬಂದಿದೆ. ಇದು ಇವತ್ತು ನಿನ್ನೆಯದಲ್ಲ. ದೆಹಲಿಯಿಂದ ಸಂದೇಶ ಬರಲಿ, ಸಿಎಂ, ಡಿಸಿಎಂ ಇಬ್ಬರೂ ಹೋಗ್ತಾರೆ,” ಎಂದು ನುಡಿದರು. “ಹೈಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ” ಎಂದು ಸ್ಪಷ್ಟಪಡಿಸಿದರು.

