January15, 2026
Thursday, January 15, 2026
spot_img

ಮೋಜು-ಮಸ್ತಿಗಾಗಿ ಕಳ್ಳತನ-ದರೋಡೆ: ಖತರ್ನಾಕ್‌ ಗ್ಯಾಂಗ್ ಹೆಡೆಮುರಿ ಕಟ್ಟಿದ ಪೊಲೀಸರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೋಜು-ಮಸ್ತಿಗಾಗಿ ಹಣ ಸಂಪಾದಿಸಲು ಅಪ್ರಾಪ್ತ ಬಾಲಕಿಯರನ್ನು ಬಳಸಿಕೊಂಡು ವಿವಿಧೆಡೆ ಕಳ್ಳತನ ಮತ್ತು ದರೋಡೆ ನಡೆಸುತ್ತಿದ್ದ ಎಂಟು ಜನರಿದ್ದ ಗ್ಯಾಂಗ್‌ವೊಂದನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಈ ಗ್ಯಾಂಗ್‌ನಲ್ಲಿ ನಾಲ್ವರು ಅಪ್ರಾಪ್ತ ಬಾಲಕಿಯರು ಸೇರಿದ್ದು, ಕಾರು ಚಾಲಕನೊಬ್ಬನ ದರೋಡೆ ಪ್ರಕರಣದ ತನಿಖೆ ವೇಳೆ ಈ ಇಡೀ ತಂಡವನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಘಟನೆ ವಿವರ:

ನವೆಂಬರ್ 18ರ ರಾತ್ರಿ ಕೆ.ಆರ್. ಮಾರುಕಟ್ಟೆ ಬಳಿಯಿಂದ ಈ ಆರೋಪಿಗಳು ವಿಮಾನ ನಿಲ್ದಾಣಕ್ಕೆ ಹೋಗಲು ಒಂದು ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ಸ್ಥಳಕ್ಕೆ ಬಂದ ಚಾಲಕ ಸ್ವಾಮಿಗೌಡ, ನಾಲ್ವರು ಬಾಲಕಿಯರು ಸೇರಿದಂತೆ ಎಂಟು ಜನರ ತಂಡವನ್ನು ಪಿಕಪ್ ಮಾಡಿದರು. ಆದರೆ, ಏರ್‌ಪೋರ್ಟ್ ಬದಲು ಹೆಚ್ಚಿನ ಹಣ ಕೊಡುವುದಾಗಿ ಆಮಿಷವೊಡ್ಡಿ, ತಮ್ಮನ್ನು ಬಿಡದಿ ಸಮೀಪ ಡ್ರಾಪ್ ಮಾಡುವಂತೆ ಚಾಲಕನನ್ನು ಮನವೊಲಿಸಿದರು.

ಚಾಲಕ ಸ್ವಾಮಿಗೌಡ ಬಿಡದಿ ಸಮೀಪದ ಜೋಗನಪಾಳ್ಯ ಗ್ರಾಮದ ಬಳಿ ಬರುತ್ತಿದ್ದಂತೆ, ಕಾರು ನಿಲ್ಲಿಸುವಂತೆ ಗ್ಯಾಂಗ್ ಸೂಚಿಸಿತ್ತು. ತಕ್ಷಣವೇ ಚಾಲಕನ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪಿಗಳು, ಕಾರು ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣವೇ ಚಾಲಕ ಸ್ವಾಮಿಗೌಡ ಬಿಡದಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಕ್ಯಾಬ್ ಚಾಲಕನ ದೂರಿನ ಆಧಾರದ ಮೇಲೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ವಾಹನದ ಜಿಪಿಎಸ್ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಿದರು. ಚಿತ್ರದುರ್ಗದ ಬಳಿ ಕಾರಿನ ಸಮೇತ ಇದ್ದ ನಾಲ್ವರು ಅಪ್ರಾಪ್ತ ಬಾಲಕಿಯರು ಸೇರಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಮೂಲದ ಸದ್ದಾಂ, ಕಬೀರ್, ಯಶವಂತ್ ಮತ್ತು ಶಿವಪ್ರಸಾದ್ ಬಂಧಿತ ವಯಸ್ಕ ಆರೋಪಿಗಳು. ಇವರು ತಮ್ಮ ಮೋಜು-ಮಸ್ತಿ ಜೀವನಶೈಲಿಗೆ ಹಣ ಹೊಂದಿಸಲು ನಾಲ್ವರು ಬಾಲಕಿಯರನ್ನು ತಮ್ಮ ಜೊತೆ ಸೇರಿಸಿಕೊಂಡು ದರೋಡೆ ಮತ್ತು ಕಳ್ಳತನ ಕೃತ್ಯಗಳಲ್ಲಿ ತೊಡಗಿದ್ದರು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಬಂಧಿತರ ವಿಚಾರಣೆ ವೇಳೆ, ಈ ಗ್ಯಾಂಗ್ ಬಿಡದಿ, ಕನಕಪುರ, ಚನ್ನಪಟ್ಟಣ, ಮಳವಳ್ಳಿ, ಶಿವಮೊಗ್ಗ ಹಾಗೂ ಶ್ರೀರಂಗಪಟ್ಟಣ ಸೇರಿದಂತೆ ಹಲವು ಕಡೆಗಳಲ್ಲಿ ತಮ್ಮ ಕೈಚಳಕ ತೋರಿಸಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಿಂದ ಪೊಲೀಸರು ಬರೋಬ್ಬರಿ 16 ಲಕ್ಷ ರೂಪಾಯಿ ಮೌಲ್ಯದ 3 ಕಾರುಗಳು, 6 ದ್ವಿಚಕ್ರ ವಾಹನಗಳು, 1 ಆಟೋ ಮತ್ತು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

Most Read

error: Content is protected !!