ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಸಮರದ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆಯು ಜುಲೈ-ಸೆಪ್ಟೆಂಬರ್ ಅವಧಿಯ ಎರಡನೇ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿದ ಬೆಳವಣಿಗೆ ಸಾಧಿಸಿದೆ. ಹಲವು ಆರ್ಥಿಕ ಸಂಸ್ಥೆಗಳು ಜಿಡಿಪಿ ಶೇ. 7ರಷ್ಟು ಪ್ರಗತಿ ಕಾಣಬಹುದು ಎಂದು ಅಂದಾಜು ಮಾಡಿದ್ದರೂ, ವಾಸ್ತವದಲ್ಲಿ ಇದು ಬೃಹತ್ ಪ್ರಮಾಣದಲ್ಲಿ ಏರಿಕೆ ಕಂಡು ಶೇ. 8.4 ರಷ್ಟು ಪ್ರಗತಿ ದಾಖಲಿಸಿದೆ.
ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕೇವಲ ಶೇ. 5.6 ರಷ್ಟು ಬೆಳವಣಿಗೆ ಕಂಡುಬಂದಿತ್ತು. ಇದೀಗ 2023-24 ರ ನಾಲ್ಕನೇ ತ್ರೈಮಾಸಿಕದಲ್ಲಿ ದಾಖಲಾಗಿದ್ದ ಶೇ. 9.5ರ ಬೆಳವಣಿಗೆಯ ಬಳಿಕ ಅತ್ಯಧಿಕ ಜಿಡಿಪಿ ಪ್ರಗತಿಯನ್ನು ಈ ತ್ರೈಮಾಸಿಕವು ಕಂಡಿದೆ.
ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ಜಿಡಿಪಿ ರೂ. 48.63 ಲಕ್ಷ ಕೋಟಿ ತಲುಪಿದೆ. ಇದು ಹಿಂದಿನ ವರ್ಷದ ಇದೇ ಅವಧಿಯ ರೂ. 44.94 ಲಕ್ಷ ಕೋಟಿಗಿಂತ ಗಣನೀಯವಾಗಿ ಹೆಚ್ಚಾಗಿದೆ.
ಕ್ಷೇತ್ರವಾರು ಪ್ರಗತಿ:
ಉತ್ಪಾದನೆ: ಶೇ. 9.1
ನಿರ್ಮಾಣ: ಶೇ. 8
ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳು: ಶೇ. 27
ವ್ಯಾಪಾರ, ಹೋಟೆಲ್, ಸಾರಿಗೆ ಇತ್ಯಾದಿಗಳು: ಶೇ. 17
ಸಾರ್ವಜನಿಕ ಆಡಳಿತ, ರಕ್ಷಣೆ ಇತ್ಯಾದಿ ಸೇವೆಗಳು: ಶೇ. 16
ಕೃಷಿ, ಅರಣ್ಯ, ಮೀನುಗಾರಿಕೆ: ಶೇ. 14
ಕೃಷಿಗೆ ಹಿನ್ನಡೆ: ಅತಿವೃಷ್ಟಿಯ ಕಾರಣದಿಂದಾಗಿ ಕೃಷಿ ವಿಭಾಗವು ಕೇವಲ ಶೇ. 3.5 ರಷ್ಟು ಬೆಳವಣಿಗೆ ಸಾಧಿಸಿದ್ದು, ಇದು ಒಟ್ಟಾರೆ ಪ್ರಗತಿಯಲ್ಲಿ ತುಸು ಹಿನ್ನಡೆಗೆ ಕಾರಣವಾಗಿದೆ. ವಿದ್ಯುತ್, ನೀರು ಇತ್ಯಾದಿ ಶೇ. 3 ಮತ್ತು ಗಣಿಗಾರಿಕೆ ಶೇ. 1ರಷ್ಟು ಪ್ರಗತಿ ಸಾಧಿಸಿವೆ.
ಪ್ರಧಾನಿ ಮೋದಿ ಹರ್ಷ:
ದೇಶದ ಆರ್ಥಿಕ ಬೆಳವಣಿಗೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “2025-26ರ ಎರಡನೇ ತ್ರೈಮಾಸಿಕದಲ್ಲಿ ಶೇ. 8.2 ರಷ್ಟು ಜಿಡಿಪಿ ಬೆಳವಣಿಗೆಯು ತುಂಬಾ ಉತ್ತೇಜನಕಾರಿಯಾಗಿದೆ. ಇದು ನಮ್ಮ ಬೆಳವಣಿಗೆಯ ಪರ ನೀತಿಗಳು ಮತ್ತು ಸುಧಾರಣೆಗಳ ಪರಿಣಾಮವನ್ನು ಹಾಗೂ ನಮ್ಮ ಜನರ ಕಠಿಣ ಪರಿಶ್ರಮ ಮತ್ತು ಉದ್ಯಮಶೀಲತೆಯನ್ನು ಪ್ರತಿಬಿಂಬಿಸುತ್ತದೆ,” ಎಂದು ಹೇಳಿದ್ದಾರೆ.

