Friday, November 28, 2025

ಹುಲಿವೇಷ ಕುಣಿತಕ್ಕೆ ಮಂತ್ರಮುಗ್ಧ: ಮಧ್ವ ಸಂಪ್ರದಾಯದ ಮೋಡಿಗೆ ಪ್ರಧಾನಿ ಮೋದಿ ಸಂತಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬರೋಬ್ಬರಿ 17 ವರ್ಷಗಳ ದೀರ್ಘ ಅಂತರದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕೃಷ್ಣನಗರಿ ಉಡುಪಿಗೆ ಭೇಟಿ ನೀಡಿ, ಇಡೀ ನಗರದ ಗಮನ ಸೆಳೆದರು. ಶ್ರೀಕೃಷ್ಣ ಮಠದಲ್ಲಿ ಆಯೋಜಿಸಲಾಗಿದ್ದ ‘ಲಕ್ಷ ಕಂಠ ಗೀತಾ ಪಾರಾಯಣ’ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದು, ಈ ಭೇಟಿಯ ಪ್ರಮುಖ ಆಕರ್ಷಣೆಯಾಗಿತ್ತು.

ಮಧ್ವ ಸಂಪ್ರದಾಯದಲ್ಲಿ ಪ್ರಧಾನಿ:

ಪ್ರಧಾನಿಯವರು ಮಧ್ವ ಸಂಪ್ರದಾಯದ ಪೂರ್ಣ ಉಡುಗೆಯಲ್ಲಿ ಕಂಗೊಳಿಸಿದರು. ಹಣೆಯ ಮೇಲೆ ಸಾಂಪ್ರದಾಯಿಕ ತಿಲಕ, ಕೊರಳಲ್ಲಿ ಪವಿತ್ರವಾದ ತುಳಸಿ ಮಣಿ ಮಾಲೆ ಮತ್ತು ತಲೆಯ ಮೇಲೆ ಆಕರ್ಷಕವಾದ ನವಿಲು ಗರಿಯ ಪೇಟವನ್ನು ಧರಿಸಿದ್ದರು. ಈ ಸಂದರ್ಭದಲ್ಲಿ, ಅವರು ಉತ್ಸಾಹದಿಂದ ಭಗವದ್ಗೀತೆಯ 15ನೇ ಅಧ್ಯಾಯದಲ್ಲಿರುವ ಪುರುಷೋತ್ತಮ ಯೋಗವನ್ನು ಪಠಿಸಿದರು.

ರಸ್ತೆಯುದ್ದಕ್ಕೂ ಅಭೂತಪೂರ್ವ ಸ್ವಾಗತ:

ಪ್ರಧಾನಿ ಮೋದಿ ಅವರು ಉಡುಪಿಗೆ ಕಾಲಿಡುತ್ತಿದ್ದಂತೆ ಅವರಿಗೆ ಅದ್ದೂರಿ ಮತ್ತು ಅಭೂತಪೂರ್ವ ಸ್ವಾಗತ ದೊರೆಯಿತು. ಕೃಷ್ಣ ಮಠದತ್ತ ರೋಡ್ ಶೋ ಮೂಲಕ ಸಾಗಿದ ಪ್ರಧಾನಿಯವರ ಮೇಲೆ ರಸ್ತೆಯುದ್ದಕ್ಕೂ ಜನಸ್ತೋಮ ಹೂಮಳೆ ಸುರಿಸಿತು. ಹುಲಿವೇಷ ಕುಣಿತದಂತಹ ಸ್ಥಳೀಯ ಕಲೆಗಳು ಮತ್ತು ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಪ್ರದರ್ಶನ ನೀಡುವ ಮೂಲಕ ಪ್ರಧಾನಿಗೆ ಗೌರವ ಸಲ್ಲಿಸಿದವು. ಉಡುಪಿ ಜನರ ಪ್ರೀತಿ, ಸಂಸ್ಕೃತಿ ಮತ್ತು ಕಲಾ ಪ್ರದರ್ಶನಕ್ಕೆ ಪ್ರಧಾನಿ ಸಂಪೂರ್ಣವಾಗಿ ಫಿದಾ ಆಗಿದ್ದಾರೆ.

ದೆಹಲಿಯಿಂದಲೇ ಪ್ರೀತಿ ಹಂಚಿಕೊಂಡ ಪ್ರಧಾನಿ:

ದೆಹಲಿಗೆ ಮರಳಿದ ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂತಸವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಸಿಕ್ಕ ಅದ್ದೂರಿ ಸ್ವಾಗತ ಮತ್ತು ಪ್ರೀತಿಯನ್ನು ಸ್ಮರಿಸಿರುವ ಅವರು, ತಮ್ಮ ಉಡುಪಿ ಪ್ರವಾಸದ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ. “ಭಕ್ತಿ, ಕಲಿಕೆ ಮತ್ತು ಸಂಪ್ರದಾಯಕ್ಕೆ ಹೆಸರಾದ ಸ್ಥಳ ಉಡುಪಿಗೆ ಭೇಟಿ ನೀಡಿದ್ದು ಸಂತೋಷವಾಯಿತು. ಉಡುಪಿಯಲ್ಲಿ ನನಗೆ ದೊರೆತ ಸ್ವಾಗತ ಸದಾ ನೆನಪಿನಲ್ಲಿ ಉಳಿಯುತ್ತದೆ. ಜನತೆಗೆ ನನ್ನ ಕೃತಜ್ಞತೆಗಳು” ಎಂದು ಬರೆದುಕೊಂಡು ಉಡುಪಿ ಜನರ ಪ್ರೀತಿಗೆ ಧನ್ಯವಾದ ಅರ್ಪಿಸಿದ್ದಾರೆ.

error: Content is protected !!