ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಿರತೆ ಹಾವಳಿ ಮಿತಿ ಮೀರಿದ್ದು, ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಒಂದು ವಾರದ ಹಿಂದಷ್ಟೇ ಐದು ವರ್ಷದ ಬಾಲಕಿಯನ್ನು ಬಲಿ ಪಡೆದ ಆಘಾತ ಮಾಸುವ ಮುನ್ನವೇ, ಮತ್ತೊಂದು ಮಗುವಿನ ಮೇಲೆ ಚಿರತೆ ದಾಳಿ ನಡೆಸಿರುವುದು ಸ್ಥಳೀಯರಲ್ಲಿ ಭೀತಿ ಹೆಚ್ಚಿಸಿದೆ.
ಇತ್ತೀಚೆಗೆ, ಬೀರೂರು ಸಮೀಪದ ನವಿಲೇಕಲ್ಲು ಗುಡ್ಡ ಗ್ರಾಮದಲ್ಲಿ ಕೂಲಿ ಕಾರ್ಮಿಕ ಬಸವರಾಜ ಅವರ ಪುತ್ರಿ, 5 ವರ್ಷದ ಸಾನ್ವಿಯನ್ನು ಮನೆಯ ಹಿಂದೆಯೇ ಚಿರತೆ ಹೊತ್ತೊಯ್ದು ಬಲಿ ಪಡೆದಿತ್ತು. ಈ ಕರುಣಾಜನಕ ಘಟನೆ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಭೀಕರ ಘಟನೆ ಮಾಸುವ ಮೊದಲೇ, ನಿನ್ನೆ ಲಿಂಗದಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿರತೆ ದಾಳಿ ನಡೆದಿದೆ. ಮನೆಯ ಬಳಿ ನಿಂತಿದ್ದ 11 ವರ್ಷದ ಬಾಲಕ ಹೃದಯ್ ಎಂಬಾತನ ಮೇಲೆ ಚಿರತೆ ಏಕಾಏಕಿ ಎರಗಿದೆ. ಗಂಭೀರವಾಗಿ ಗಾಯಗೊಂಡಿರುವ ಬಾಲಕನನ್ನು ತಕ್ಷಣವೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿರತೆಯ ಈ ನಿರಂತರ ಹಾವಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಗ್ರಾಮಸ್ಥರ ದೂರು. ಕೇವಲ ನಿನ್ನೆಯಷ್ಟೇ ತರೀಕೆರೆ ತಾಲೂಕಿನ ಕೆಂಚಾಪುರ ಗ್ರಾಮದ ಮೇರಿಯಮ್ಮ ಎಂಬುವರ ಮನೆಯ ಸುತ್ತಮುತ್ತ ಚಿರತೆ ಓಡಾಡುತ್ತಿರುವ ಮತ್ತು ನೀರು ಕುಡಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಗ್ರಾಮಸ್ಥರು ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ನಿರಂತರವಾಗಿ ಚಿರತೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿ ಮಕ್ಕಳು ಹಾಗೂ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದರೂ, ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿರುವುದು ಸ್ಥಳೀಯರ ಆತಂಕಕ್ಕೆ ಮುಖ್ಯ ಕಾರಣವಾಗಿದೆ. ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಚಿರತೆಯನ್ನು ಸೆರೆಹಿಡಿದು ಜನರ ಜೀವ ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.

