Friday, November 28, 2025

ಕಲೆ, ಸಾಹಿತ್ಯ, ಸಂಸ್ಕೃತಿಯೇ ನಮ್ಮ ಇತಿಹಾಸ: ಬೀದರ ಸಾಂಸ್ಕೃತಿಕ ಉತ್ಸವಕ್ಕೆ ಸಚಿವ ಈಶ್ವರ್ ಖಂಡ್ರೆ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಲೆ, ಸಾಹಿತ್ಯ, ಸಂಸ್ಕೃತಿಗಳು ನಮ್ಮ ಇತಿಹಾಸ ಮತ್ತು ಕನ್ನಡ ಭಾಷೆಯ ಬೆಳವಣಿಗೆಗೆ ಸಂಗೀತ ಕಾರ್ಯಕ್ರಮಗಳಂತಹ ಪೂರಕ ವಾತಾವರಣ ಅಗತ್ಯ ಎಂದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಬಿ. ಖಂಡ್ರೆ ಅವರು ಪ್ರತಿಪಾದಿಸಿದರು.

ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕ.ಸಾ.ಪ.) ಮತ್ತು ಸಮರ್ಥ ಸೇವಾ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ‘ಬೀದರ ಸಾಂಸ್ಕೃತಿಕ ಉತ್ಸವ’ಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಸಚಿವರು ಮಾತನಾಡಿದರು.

ಸಂಸ್ಕೃತಿ ಬಿಟ್ಟು ಮೊಬೈಲ್‌ಗೆ ಮಾರುಹೋಗಬೇಡಿ!

ಇಂದಿನ ಯುವ ಪೀಳಿಗೆ ನಮ್ಮ ಸಂಸ್ಕೃತಿಯನ್ನು ನಿರ್ಲಕ್ಷಿಸಿ ಮೊಬೈಲ್‌ಗಳಿಗೆ ಮಾರುಹೋಗುತ್ತಿರುವುದರಿಂದ ಸಾಮಾಜಿಕ ವ್ಯವಸ್ಥೆ ಹಾಳಾಗುತ್ತಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು. “ಮಕ್ಕಳು ವಿಷಯದ ಗಾಂಭೀರ್ಯತೆ ಅರಿತುಕೊಳ್ಳದೆ ಮೊಬೈಲ್ ಬಳಸುತ್ತಿರುವುದರಿಂದ ವಾಸ್ತವಿಕ ಅಂಶಗಳನ್ನು ಗ್ರಹಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಬೃಹತ್ ಸಾಂಸ್ಕೃತಿಕ ಉತ್ಸವಗಳಿಂದ ಮಾತ್ರ ಕನ್ನಡದ ಅಸ್ಮಿತೆಯನ್ನು ತಿಳಿದುಕೊಳ್ಳಲು ಸಾಧ್ಯ,” ಎಂದರು.

ಈ ಉತ್ಸವವು ಅನೇಕ ಜಿಲ್ಲೆಯ ಕಲಾವಿದರಿಗೆ ಪ್ರೋತ್ಸಾಹ ನೀಡುವುದಲ್ಲದೆ, ಕನ್ನಡದ ದಿಕ್ಕಿನಲ್ಲಿ ದಾಪುಗಾಲು ಹಾಕಲು ಸ್ಫೂರ್ತಿ ನೀಡುತ್ತದೆ. ಕನ್ನಡ ಭಾಷೆ ಬೆಳೆಸಲು ಸರ್ಕಾರ ಬದ್ಧವಾಗಿದ್ದು, ಎಲ್ಲರೂ ತಮ್ಮ ತಮ್ಮ ಕ್ಷೇತ್ರದಲ್ಲಿ ದುಡಿಯುತ್ತಲೇ ಭಾಷಾಭಿಮಾನ ಬೆಳೆಸಲು ಸಚಿವರು ಕರೆ ನೀಡಿದರು.

ಶಿಕ್ಷಕರ ಕೊರತೆ ನಿವಾರಣೆಗೆ ಕ.ಸಾ.ಪ. ಮನವಿ

ಕಾರ್ಯಕ್ರಮದಲ್ಲಿ ಸ್ವಾಗತ ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದ ಕ.ಸಾ.ಪ. ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರು, ಕನ್ನಡ ಮಾಧ್ಯಮ ಶಾಲೆಗಳಲ್ಲಿನ ಭೀಕರ ಶಿಕ್ಷಕರ ಕೊರತೆ ಮತ್ತು ಮಕ್ಕಳಿಲ್ಲ ಎಂಬ ಕಾರಣ ನೀಡಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ನಡೆಯಿಂದ ನೋವಾಗಿದೆ ಎಂದರು. “ಶಾಲೆಯಲ್ಲಿ ಒಂದೇ ಒಂದು ಮಗು ಇದ್ದರೂ ಆ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು” ಎಂದು ಸಚಿವರಲ್ಲಿ ಮನವಿ ಮಾಡಿದರು.

ಗಾಯಕ ವಿಜಯ ಪ್ರಕಾಶ್ ಮತ್ತು ತಾರೆಯರ ರಂಜನೆ

ಈ ಸಾಂಸ್ಕೃತಿಕ ಸಂಜೆಯಲ್ಲಿ ಖ್ಯಾತ ಗಾಯಕರಾದ ವಿಜಯ ಪ್ರಕಾಶ ಅವರ ಮಧುರ ಗಾಯನಕ್ಕೆ ಸಾವಿರಾರು ಕನ್ನಡ ಅಭಿಮಾನಿಗಳು ಮನಸೋತು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ವಿಜಯ ಪ್ರಕಾಶ್ ಅವರು ‘ಬೆಳಗೆದ್ದು ಯಾರ ಮುಖವ ನೋಡಿದೆ’, ‘ಸಿಂಗಾರ ಸೀರಿಯೆ’, ‘ಕಾಣದಂತೆ ಮಾಯವಾದನು’, ‘ಯಾರೇ ನೀ ರೋಜಾ ಹೂವೇ’ ಮುಂತಾದ ಹಾಡುಗಳನ್ನು ಹಾಡಿದರು. ಗಾಯನಕ್ಕೆ ಐಶ್ವರ್ಯ ರಂಗರಾಜನ್ ಮತ್ತು ನಿಖಿಲ್ ಸಾಥ್ ನೀಡಿದರು. ಚಿತ್ರನಟಿ ಅಮೂಲ್ಯ, ಸುಲಕ್ಷ ಕೈರ, ಚಿತ್ರ ನಿರ್ಮಾಪಕರಾದ ಸೂರಪ್ಪ ಬಾಬು, ಉಮೇಶ ಸಲಗಾರ, ಖ್ಯಾತ ನಿರೂಪಕಿ ಅನುಶ್ರೀ ಕಾರ್ಯಕ್ರಮಕ್ಕೆ ಮೆರುಗು ತಂದರು.

ಇದೇ ಸಂದರ್ಭದಲ್ಲಿ ‘ಜಗನ್ಮಾತೆ ಅಕ್ಕಮಹಾದೇವಿ’ ಚಲನಚಿತ್ರದ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು. ಗುರುಪ್ರಸಾದ ಮತ್ತು ಚಂದ್ರಶೇಖರ ಅವರ ರಚನೆ ಮತ್ತು ನಿರ್ದೇಶನದ ‘ಕನ್ನಡ ನನ್ನ ಕನ್ನಡ’ ಗೀತೆ ಮೊಳಗಿತು.

ವೇದಿಕೆಯಲ್ಲಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಡಾ. ರಜನೀಶ ವಾಲಿ, ಬಾಬು ವಾಲಿ, ಬಸವರಾಜ ಜಾಬಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಸ್ಥಳೀಯ ಕಲಾವಿದರಾದ ಮಲ್ಲಿಕಾರ್ಜುನ ಸ್ವಾಮಿ, ಅಶ್ವಿನಿ ರಾಜಕುಮಾರ ಬಂಬಳ್ಳಿ, ಶಂಭುಲಿಂಗ ವಾಲದೊಡ್ಡಿ, ಮಹೇಶ್ವರಿ ಪಾಂಚಾಳ, ಮಹೇಶ ಕುಂಬಾರ, ನಾಗರಾಜ ಜೋಗಿ, ರೇಖಾ ಅಪರಾವ ಸೌದಿ ತಮ್ಮ ಗಾಯನ ಪ್ರಸ್ತುತ ಪಡಿಸಿದರು. ಪೂರ್ಣಚಂದ್ರ ಮೈನಾಳೆ ತಂಡದ ನೃತ್ಯ ಹಾಗೂ ರಘುಪ್ರೀಯ ಅವರ ಹಾಸ್ಯ ಕಾರ್ಯಕ್ರಮಕ್ಕೆ ರಂಜನೆ ನೀಡಿತು.

ಕಾರ್ಯಕ್ರಮದ ಆರಂಭದಲ್ಲಿ ಭಾನು ಪ್ರಿಯಾ ಅರಳಿ ತಂಡದವರು ನಾಡಗೀತೆ ಹಾಡಿದರು. ಬಾಭುರಾವ ದಾನಿ ವಂದನಾರ್ಪಣೆ ಮಾಡಿದರು. ಸಾವಿರಾರು ಕನ್ನಡಾಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

error: Content is protected !!