ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಪ್ಪುಹಣವನ್ನು ಬೇರುಸಹಿತ ಕಿತ್ತೊಗೆಯಲು ಕೇಂದ್ರ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳಿಗೆ ಮುಂದಾಗಿದ್ದು, ವಿದೇಶಗಳಲ್ಲಿ ಆಸ್ತಿ ಹೊಂದಿರುವ ಅಥವಾ ಹಣಕಾಸು ಖಾತೆಗಳನ್ನು ನಿರ್ವಹಿಸುವ ಸಾವಿರಾರು ಭಾರತೀಯ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆಯು ಸಂದೇಶ ರವಾನಿಸಲು ಆರಂಭಿಸಿದೆ. ವಿದೇಶಿ ಆಸ್ತಿಗಳ ಸಂಪೂರ್ಣ ವಿವರವನ್ನು ನೀಡಲು ಡಿಸೆಂಬರ್ 31 ರವರೆಗೆ ಗಡುವು ನೀಡಲಾಗಿದೆ. ಒಂದು ತಿಂಗಳ ಒಳಗಾಗಿ ಆಸ್ತಿಗಳ ಘೋಷಣೆ ಮಾಡದಿದ್ದರೆ ಭಾರೀ ಮೊತ್ತದ ದಂಡ ತೆರಲು ಸಿದ್ಧರಾಗಿ ಎಂದು ಐಟಿ ಇಲಾಖೆ ಎಚ್ಚರಿಸಿದೆ.
2024-25ರ ಹಣಕಾಸು ವರ್ಷದ ‘ಸ್ವಯಂಚಾಲಿತ ಮಾಹಿತಿ ವಿನಿಮಯ’ ದತ್ತಾಂಶವನ್ನು ಆಳವಾಗಿ ವಿಶ್ಲೇಷಿಸಿದ ನಂತರ, ಇಲಾಖೆಯು ಸುಮಾರು 25,000 ‘ಹೈ-ರಿಸ್ಕ್’ ತೆರಿಗೆದಾರರನ್ನು ಗುರುತಿಸಿದೆ. ಈ ವ್ಯಕ್ತಿಗಳು ಸಲ್ಲಿಸಿದ 2025-26ರ ಐಟಿ ರಿಟರ್ನ್ಸ್‌ಗಳು ಅವರ ವಿದೇಶಿ ಆಸ್ತಿ ವಿವರಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂಬುದು ಇಲಾಖೆಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಎಚ್ಚರಿಕೆಯ ಸಂದೇಶಗಳನ್ನು ಕಳುಹಿಸಲಾಗುತ್ತಿದೆ.
ವಿದೇಶದಲ್ಲಿರುವ ಆಸ್ತಿಗಳು ಮತ್ತು ಅಲ್ಲಿಂದ ಬಂದ ಆದಾಯದ ವಿವರಗಳನ್ನು ಸರಿಯಾಗಿ ತೋರಿಸಲು ಇದು “ಕೊನೆಯ ಅವಕಾಶ” ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ ಸ್ಪಷ್ಟಪಡಿಸಿದೆ.
ಭಾರತದಲ್ಲಿ ತೆರಿಗೆ ಪಾವತಿಸುವ ಎಲ್ಲ ಭಾರತೀಯರಿಗೆ ಮಾತ್ರ ಈ ಎಚ್ಚರಿಕೆ ಅನ್ವಯಿಸುತ್ತದೆ. ಭಾರತದಲ್ಲಿ ತೆರಿಗೆ ಪಾವತಿಸದ ಅನಿವಾಸಿ ಭಾರತೀಯರ ಮೇಲೆ ಈ ನಿಯಮ ಯಾವುದೇ ಪರಿಣಾಮ ಬೀರುವುದಿಲ್ಲ.
ಇತ್ತೀಚಿನ ವರ್ಷಗಳಲ್ಲಿ ದುಬೈನಲ್ಲಿ ಆಸ್ತಿ ಖರೀದಿಸುವ ವಿದೇಶೀಯರ ಪಟ್ಟಿಯಲ್ಲಿ ಭಾರತೀಯರು ಅಗ್ರಸ್ಥಾನದಲ್ಲಿದ್ದಾರೆ. ದುಬೈ ಭೂ ದಾಖಲೆ ಇಲಾಖೆಯ ಪ್ರಕಾರ, 2024 ರಲ್ಲಿ ದುಬೈನ ಒಟ್ಟು ಆಸ್ತಿ ವಹಿವಾಟುಗಳಲ್ಲಿ ಭಾರತೀಯ ಖರೀದಿದಾರರ ಪಾಲು ಶೇ. 22ರಷ್ಟಿದ್ದು, ಸರಿಸುಮಾರು 150 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ. ಈ ಖರೀದಿದಾರರಲ್ಲಿ ಹಲವರು ಭಾರತದಲ್ಲಿ ತೆರಿಗೆ ಪಾವತಿಸುತ್ತಿದ್ದಾರೆ ಮತ್ತು ಐಟಿ ರಿಟರ್ನ್ಸ್ ಸಲ್ಲಿಸುವಾಗ ತಮ್ಮ ವಿದೇಶಿ ಆಸ್ತಿ ಹಾಗೂ ವಿದೇಶಿ ಮೂಲದ ಆದಾಯವನ್ನು ಸರಿಯಾಗಿ ಘೋಷಿಸುವುದು ಕಡ್ಡಾಯವಾಗಿದೆ.

