ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ನ್ಯಾಟೋ ಸದಸ್ಯ ರಾಷ್ಟ್ರವಾದ ಪೋಲೆಂಡಿನ ಮೇಲೆ ನಡೆದ ದಾಳಿ ರಷ್ಯಾದಿಂದ ನಡೆದ ದಾಳಿಯಲ್ಲ ಎಂದು ಪೋಲೆಂಡ್ ಹಾಗೂ ನ್ಯಾಟೋ ಸ್ಪಷ್ಟಪಡಿಸಿವೆ. ನಿನ್ನೆ ಉಕ್ರೇನ್ ಹಾಗೂ ಪೋಲೆಂಡ್ ನಡುವಿನ ಗಡಿ ಪ್ರದೇಶದಲ್ಲಿ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಇಬ್ಬರು ಪೋಲೆಂಡ್ ನಾಗರಿಕರು ಪ್ರಾಣಕಳೆದುಕೊಂಡಿದ್ದರು. ಪ್ರಾಥಮಿಕವಾಗಿ ಇದು ರಷ್ಯಾದಿಂದ ನಡೆದ ದಾಳಿಯಾಗಿರಬಹುದು ಎನ್ನಲಾಗಿತ್ತು.
ಪೋಲೆಂಡ್ ನ್ಯಾಟೋ (North Atlantic Treaty Organization) ಸದಸ್ಯ ರಾಷ್ಟ್ರವಾಗಿರುವುದರಿಂದ ಪೋಲೆಂಡಿನ್ ಮೇಲೆ ದಾಳಿ ನಡೆಸಿದರೆ ಅದು ನೇರವಾಗಿ ನ್ಯಾಟೋ ಪಡೆಗಳನ್ನು ಎದುರುಹಾಕಿಕೊಂಡಂತೆ ಹಾಗಾಗಿ ರಷ್ಯಾ ಹಾಗೂ ನ್ಯಾಟೋ ಪಡೆಗಳ ವಿರುದ್ಧ ಯುದ್ಧ ಪ್ರಾರಂಭವಾಗಲಿದೆ ಎಂಬ ಆತಂಕ ಜಾಗತಿಕವಾಗಿ ಸೃಷ್ಟಿಯಾಗಿತ್ತು. ಆದರೆ ನಿನ್ನೆ ರಾತ್ರಿ ಈ ಕುರಿತು ನ್ಯಾಟೋ ಹಾಗೂ ಪೋಲೆಂಡ್ ಸ್ಪಷ್ಟನೆ ನೀಡಿದ್ದು ಇದು ರಷ್ಯಾದಿಂದ ನಡೆದ ದಾಳಿಯಲ್ಲ ಎಂದಿವೆ.
ʼರಷ್ಯಾ ದಾಳಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಉಕ್ರೇನ್ ಪಡೆಗಳು ಹಾರಿಸಿದ ಕ್ಷಿಪಣಿ ಪೋಲೀಷ್ ಭೂ ಪ್ರದೇಶದಲ್ಲಿ ಬಿದ್ದಿರಬಹುದು. ಹಾಗಾಗಿ ಇದು ಉದ್ದೇಶಪೂರ್ವಕವಾದ ದಾಳಿಯಲ್ಲ. ಎರಡೂ ಕಡೆಯವರ ಮೇಲೆ ಆರೋಪ ಹೊರಸಲು ಸಾಧ್ಯವಿಲ್ಲʼ ಎಂದು ನ್ಯಾಟೋ ಸ್ಪಷ್ಟಪಡಿಸಿದೆ.
NATO ಸೆಕ್ರೆಟರಿ ಜನರಲ್ ಜೆನ್ಸ್ ಸ್ಟೋಲ್ಟೆನ್ಬರ್ಗ್ ಕೂಡ ಈ ಘಟನೆಯು ಎರಡೂ ಕಡೆಯ ಉದ್ದೇಶಪೂರ್ವಕ ದಾಳಿಯ ಪರಿಣಾಮವಾಗಿದೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ ಮತ್ತು ರಷ್ಯಾದ ಆಕ್ರಮಣದಿಂದ ತಮ್ಮ ದೇಶವನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿರುವ ಉಕ್ರೇನಿಯನ್ ಪಡೆಗಳು ತಪ್ಪಿತಸ್ಥರಲ್ಲ ಎಂದು ಹೇಳಿದ್ದಾರೆ.
ಹೀಗಾಗಿ ನ್ಯಾಟೋ ಹಾಗೂ ರಷ್ಯಾ ನಡುವೆ ಕವಿದಿದ್ದ ಯುದ್ಧಕಾರ್ಮೋಡಗಳು ಇಗ ತುಸು ತಿಳಿಯಾಗಿವೆ. ಉದ್ದೇಶಿತ ದಾಳಿಯಲ್ಲ ಎಂಬ ಅಂಶ ಸ್ಪಷ್ಟವಾಗಿರುವುದರಿಂದ ನ್ಯಾಟೋ ನೇರವಾಗಿ ಪ್ರವೇಶಿಸುವ ಆತಂಕ ಸದ್ಯದ ಮಟ್ಟಿಗೆ ದೂರವಾಗಿದೆ.