ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲಿಷ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರಮುಖ ತಂಡ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ಗೆ ಪೋರ್ಚುಗಲ್ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಗುಡ್ ಬೈ ಹೇಳಿದ್ದಾರೆ.
ಈ ಕುರಿತು ಮ್ಯಾಂಚೆಸ್ಟರ್ ಯುನೈಟೆಡ್ ತನ್ನ ಅಧಿಕೃತ ಹೇಳಿಕೆಯಲ್ಲಿ ಪ್ರಕಟಿಸಿದೆ. ‘ಕ್ರಿಸ್ಟಿಯಾನೊ ರೊನಾಲ್ಡೊ ಅವರು ಪರಸ್ಪರ ಒಪ್ಪಂದದ ಮೇರೆಗೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ತೊರೆಯುತ್ತಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಪರ ಎರಡು ಅವಧಿಯಲ್ಲಿ ಆಡಿದ ರೊನಾಲ್ಡೊ ತಂಡಕ್ಕೆ ಶ್ರೇಷ್ಠವಾದ ಕೊಡುಗೆ ನೀಡಿದ್ದಾರೆ. 346 ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿ 145 ಗೋಲುಗಳನ್ನು ಬಾರಿಸಿದ್ದಾರೆ.
ಅವರ ಈ ಸಾಧನೆಗೆ ಧನ್ಯವಾದ ಹೇಳಲು ಬಯಸುತ್ತೇವೆ. ರೊನಾಲ್ಡೊ ಹಾಗೂ ಅವರ ಕುಟುಂಬದ ಮುಂದಿನ ಭವಿಷ್ಯಕ್ಕೆ ಕ್ಲಬ್ ವತಿಯಿಂದ ಶುಭ ಹಾರೈಸುತ್ತೇವೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಕ್ರಿಸ್ಟಿಯಾನೊ ರೊನಾಲ್ಡೊ ಅವರು ಇತ್ತೀಚೆಗೆ ಪಿಯರ್ಸ್ ಮಾರ್ಗನ್ ಅವರ ಸಂದರ್ಶನದಲ್ಲಿ ಭಾಗವಹಿಸಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮ್ಯಾನೇಜರ್ ಎರಿಕ್ ಟೆನ್ ಹ್ಯಾಗ್ ಅವರ ವಿರುದ್ಧ ಕಿಡಿ ಕಾರಿದ್ದರು.