ಕೊಡವ ಪ್ರೀಮಿಯರ್ ಲೀಗ್ ಕ್ರಿಕೆಟ್: ಮೈಸೂರು ಮಕ್ಕ ತಂಡ ಚಾಂಪಿಯನ್

ಹೊಸ ದಿಗಂತ ವರದಿ, ಮಡಿಕೇರಿ:

ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕೊಡವ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ‘ಮೈಸೂರು ಮಕ್ಕ’ ತಂಡ ಚಾಂಪಿಯನ್ ಆಗಿ ಹೊರಹಮ್ಮಿದೆ.
ಟೀಂ ಕೈಮಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ತೃತೀಯ ಸ್ಥಾನವನ್ನು ಆ್ಯಂಡ್ ಜಿ ಕ್ರಿಯೇಷನ್ ನಾಲ್‍ನಾಡ್ ನರಿಯ ತಂಡ ಪಡೆದುಕೊಂಡಿತು.
ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಹೆಚ್ಚು ಪಂದ್ಯ ಗೆದ್ದ ಹಿನ್ನೆಲೆಯಲ್ಲಿ ಮೈಸೂರು ಮಕ್ಕ ಹಾಗೂ ಟೀಂ ಕೈಮಡ ಫೈನಲ್ ಪಂದ್ಯಾವಳಿ ಪ್ರವೇಶ ಪಡೆದುಕೊಂಡಿತು.
ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ಫೈನಲ್ ಪಂದ್ಯವನ್ನು 3 ಓವರ್’ಗೆ ಸೀಮಿತಗೊಳಿಸಲಾಗಿತ್ತು. ಪಂದ್ಯಾವಳಿಯಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಮೈಸೂರು ಮಕ್ಕ ತಂಡಕ್ಕೆ ಟೀಂ ಕೈಮಡ 25 ರನ್‍ಗಳ ಗುರಿ ನೀಡಿತು.
ಗುರಿ ಬೆನ್ನತ್ತಿದ ಮೈಸೂರು ಮಕ್ಕ 2.2 ಓವರ್‌ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಗುರಿಯನ್ನು ಪೂರ್ಣಗೊಳಿಸಿ ವಿಜಯ ಸಾಧಿಸಿತು.
ತೀರ್ಪುಗಾರರಾಗಿ ರವಿ, ಯಶ್ವಂತ್ ಧನುಷ್, ರಘು, ಹರ್ಷವರ್ಧನ್, ರಾಹುಲ್, ವೀಕ್ಷಕ ವಿವರಣೆಗಾರರಾಗಿ ಚಂಡೀರ ರಚನ್, ಕೊಟ್ಟಂಗಡ ಅಪ್ಪಣ್ಣ, ಪೋರ್ಕಂಡ ಸುನಿಲ್ ಕಾರ್ಯನಿರ್ವಹಿಸಿದರು.
ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕ್ರೀಡಾಪ್ರೇಮಿಗಳು ಚಪ್ಪಾಳೆ, ಶಿಳ್ಳೆ, ಬ್ಯಾಂಡ್ ಬಾರಿಸಿ ತಂಡಗಳನ್ನು ಪ್ರೋತ್ಸಾಹಿಸಿದರು.

ಆಲ್ಬಂ ಸಾಂಗ್ ಬಿಡುಗಡೆ:
ಇದೇ ಸಂದರ್ಭ ಲೇಲುಳ್ಳಿ.. ಲೇ..ಲೇ ಆಲ್ಬಮ್ ಸಾಂಗ್ ಬಿಡುಗಡೆಗೊಳಿಸಲಾಯಿತು. ಇದರೊಂದಿಗೆ ತಿಂಗಕೊರ್ ಮೊಟ್ಟ್ ತಲಕಾವೇರಿಕ್ ಕಲಾತಂಡದಿಂದ ನಡೆದ ಉಮ್ಮತ್ತಾಟ್, ಕೋಲಾಟ್, ಪರೆಯಕಳಿ, ಸಾಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿತು.

ಬಹುಮಾನ ವಿತರಣೆ ಸಮಾರಂಭದಲ್ಲಿ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ,
ಸಮಾಜ ಸೇವಕ ಡಾ.ಮಂಥರ್ ಗೌಡ ,  ರೆನ್ ಜಿಟ್ ಟೆಕ್ನೋಲಾಜಿಸ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ನಂದೀರ ಬಿ.ತಿಮ್ಮಯ್ಯ ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಕುಟ್ಟಂಡ ಕುಟ್ಟಪ್ಪ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!