ಹೊಸ ದಿಗಂತ ವರದಿ, ಕಲಬುರಗಿ:
ನ.15ರಂದು ಸೇಡಂನಲ್ಲಿ ನಡೆದ ಕೋಲಿ ಸಮಾಜದ ಮುಖಂಡ ಮಲ್ಲಿಕಾರ್ಜುನ ಮುತ್ಯಾಲ ಕೊಲೆ ಪ್ರಕರಣ ಭೇದಿಸಲು ಯಶಸ್ವಿಯಾಗಿದ್ದು, ನಾಲ್ವರು ಆರೋಪಿಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಂದು ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ ತಿಳಿಸಿದರು.
ಸೋಮವಾರ ನಗರದ ಪೋಲಿಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸ್ವಂತ ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ನ.15ರಂದು ಶವವಾಗಿ ಮಲ್ಲಿಕಾರ್ಜುನ ಮುತ್ಯಾಲರ ದೇಹ ದೊರಕಿತ್ತು. ಇದರಿಂದ ಇಡೀ ತಾಲೂಕು ಗಾಬರಿಯಾಗಿತ್ತು. ಪ್ರಕರಣದ ಗಂಭೀರತೆ ಅರಿತಿದ್ದ ಪೊಲೀಸ್ ಇಲಾಖೆ ಕೇವಲ 14 ದಿನಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಮಲ್ಲಿಕಾರ್ಜುನ ಮುತ್ಯಾಲ ಅವರ ಕೊಲೆಗೆ ಸುಪಾರಿ ನೀಡಿದ ಮೊದಲ ಆರೋಪಿ ಸೇಡಂ ನಿವಾಸಿ, ಹಾರ್ಡ್‌ವೇರ್ ಅಂಗಡಿ ಮಾಲೀಕ ಲಿಂಗರಾಜ್ ಮಾದೇನವರ್ ಸೇರಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಸೇಡಂ,ನ ಅವಿನಾಶ್ ಹರಿ ರಾಠೋಡ, ಕರಣ ಅಲಿಯಾಸ್ ಪಿತಲ ಗೋವಿಂದ ರಾಠೋಡ, ವಿಜಯಕುಮಾರ್ ಯಾಕಾಪುರ ಬಂಧಿತ ಆರೋಪಿಗಳಾಗಿದ್ದಾರೆ.ಇದರ ಜತೆಗೆ ನಾಲ್ಕು ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ಸಿಪಿಐ ಆನಂದ ರಾವ್, ಪಿಎಸ್‌ಈ ಒಡೆಯರ್ ಸೇರಿ ಸೇಡಂ ಪೊಲೀಸ್ ಠಾಣೆ ಸಿಬ್ಬಂದಿ ಇದ್ದರು.